ವಿಜಯಪುರ: ಕೃತಕ ರಸಗೊಬ್ಬರ ಅಭಾವ ತೋರಿಸಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವ ಅಂಗಡಿಗಳ ವಿರುದ್ಧ ಕ್ರಮಕ್ಕೆ ಮುಂದಾಗುವಂತೆ ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘಟನೆ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ರಸಗೊಬ್ಬರ ದಾಸ್ತಾನು ಇದ್ದರೂ ಕೆಲ ಅಂಗಡಿಗಳ ಮಾಲೀಕರು ರೈತರಿಗೆ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಪ್ರಸ್ತಕ ಸಾಲಿನಲ್ಲಿ ರಸಗೊಬ್ಬರ ಕೊರತೆಯಿಲ್ಲ ಎಂದು ಕೇಂದ್ರ ಸರ್ಕಾರ ಕೂಡ ಹೇಳಿದೆ. ಆದರೆ, ಉದ್ದೇಶ ಪೂರ್ವಕವಾಗಿಯೇ ಅಧಿಕ ದರಕ್ಕೆ ಯೂರಿಯಾ ಮಾರಾಟ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಇತ್ತ ಸಂಬಂಧಿಸಿದ ಅಧಿಕಾರಿಗಳು ಅಂತಹ ಅಂಗಡಿ ಮಾಲೀಕರಿಗೆ ಬಿಸಿ ಮುಟ್ಟಿಸುವ ಕಾರ್ಯಕ್ಕೆ ಮುಂದಾಗಬೇಕು. ಸರ್ಕಾರ ನಿಗದಿಪಡಿಸಿದ ದರಕ್ಕೆ ರಸಗೊಬ್ಬರ ಮಾರಾಟ ಮಾಡಬೇಕು. ಇಲ್ಲವಾದರೆ ದುಬಾರಿ ಬೆಲೆಗೆ ಮಾರಾಟ ಮಾಡುವ ಅಂಗಡಿಗಳ ಮುಂದೆ ಧರಣಿ ನಡೆಸುತ್ತೇವೆ ಎಂದು ಎಚ್ಚರಿಸಿದರು.