ವಿಜಯಪುರ: ಜಿಲ್ಲೆಯಲ್ಲಿ ನಿರೀಕ್ಷೆ ಮೀರಿ ಮಳೆಯಾದ ಹಿನ್ನೆಲೆಯಲ್ಲಿ ಅನ್ನದಾತ ಈಗ ಬಂಪರ್ ಬೆಳೆಯ ಕನಸು ಕಾಣತೊಡಗಿದ್ದಾನೆ. ಮುಖ್ಯವಾಗಿ ಜಿಲ್ಲೆಯಲ್ಲಿ ಅತಿ ಹೆಚ್ಚು ತೊಗರಿ ಬೆಳೆ ಈ ಬಾರಿ ಬೆಳೆಯಲಾಗಿದೆ. ಸರ್ಕಾರ ಎಷ್ಟು ಕ್ವಿಂಟಲ್ ತೊಗರಿಯನ್ನು ಬೆಂಬಲ ಬೆಲೆ ನೀಡಿ ಖರೀದಿಸುತ್ತೆ ಎನ್ನುವ ಚಿಂತೆ ಇದ್ದರೆ, ಬೆಳೆದ ತೊಗರಿಗೆ ಕೀಟ ರೋಗದ ಆತಂಕ ಸಹ ಈಗ ಸೃಷ್ಟಿಯಾಗಿದೆ.
ವಿಜಯಪುರ ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಿಂದ ಉತ್ತಮ ಮಳೆಯಾಗುತ್ತಿದೆ. ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳಿನಲ್ಲಿ ಒಟ್ಟು 449 ಎಂಎಂ ಮಳೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 93 ಎಂಎಂ ಮಳೆ ಹೆಚ್ಚುವರಿಯಾಗಿದೆ. ಹೀಗಾಗಿ ಕಡಿಮೆ ಬಂಡವಾಳ ಹಾಗೂ ಅದಕ್ಕೆ ಹೆಚ್ಚು ಲಾಭ ತರುವ ತೊಗರಿಯನ್ನು ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಬೆಳೆಸಲಾಗಿದೆ.
ಜಿಲ್ಲೆಯ 4.89 ಲಕ್ಷ ಹೆಕ್ಟೇರ್ ಕೃಷಿ ಭೂಮಿಯಲ್ಲಿ 3.60 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೇವಲ ತೊಗರಿ ಬೆಳೆಯೊಂದನ್ನೇ ಬೆಳೆಯಲಾಗಿದೆ. ಈಗ ತೊಗರಿ ಆಳೆತ್ತೆರಕ್ಕೆ ಬೆಳೆದು ನಿಂತಿದೆ. ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಮಳೆಯಿಂದ ಬೆಳೆ ಕೊಳೆಯುವ ಆತಂಕ ಸಹ ಎದುರಾಗಿದೆ. ನಿಂತ ನೀರು ಹೊರಗೆ ಹೋಗಲು ದಾರಿಯಿಲ್ಲದೆ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ನೆಟ್ಟಿ ಹಾಯ್ದಿದೆ. (ನೀರು ನಿಂತು ತೊಗರಿಯ ಬುಡ ಕೊಳೆಯುವಿಕೆ) ಇದು ರೈತರಲ್ಲಿ ಆತಂಕ ಸೃಷ್ಟಿ ಮಾಡಿದೆ. ಇಂಥ ರೈತರಿಗೆ ಕೃಷಿ ಇಲಾಖೆ ಪರಿಹಾರೋಪಾಯ ನೀಡಿದ್ದು ಕೀಟರೋಗ ತಡೆಯಲು ಕೀಟನಾಶಕ ಮಿತವಾಗಿ ಬಳಕೆ ಮಾಡಲು ಸೂಚಿಸಿದೆ.
ಕಳೆದ ವರ್ಷವೂ ಸಹ ಜಿಲ್ಲೆಯಲ್ಲಿ ತೊಗರಿ ಬೆಳೆದು ಅತಿಯಾದ ನೀರಿನಿಂದ ಕೀಟ ರೋಗ ಬಾಧೆಯನ್ನು ರೈತರು ಎದುರಿಸಿದ್ದರು. ಆದರೂ ಹೆಚ್ಚು ತೊಗರಿ ಕೈ ಸೇರಿದ್ದರಿಂದ ಸ್ವಲ್ಪ ನೆಮ್ಮದಿ ಪಟ್ಟಿದ್ದರು. ಈ ಬಾರಿ ಇದ್ದ ಕೃಷಿ ಭೂಮಿಯಲ್ಲಿ ಶೇ. 80 ರಷ್ಟು ತೊಗರಿ ಬೆಳೆಯಲಾಗಿದೆ. ಇದಕ್ಕೆ ಸರ್ಕಾರ ಬೆಂಬಲ ಬೆಲೆ ನೀಡಿ ಖರೀದಿಸಿದರೆ ರೈತರು ಲಾಭದ ಮುಖ ನೋಡಬಹುದು.
ಇದರ ಮಧ್ಯೆ ಲಾಕ್ಡೌನ್, ಕೊರೊನಾ ಆತಂಕದಿಂದ ಕಳೆ ಕೀಳಲು ಕೂಲಿ ಕಾರ್ಮಿಕರು ಸಹ ಸಿಗುತ್ತಿಲ್ಲ. ಹೆಚ್ಚುವರಿ ಹಣ ನೀಡಿ ಕಳೆ ಹಾಗೂ ಇನ್ನಿತರ ಹೊಲದ ಕೆಲಸ ಮಾಡಿಸಿಕೊಳ್ಳಬೇಕಾಗಿದೆ. ಕಳೆದ ವರ್ಷ ಬೆಳೆದ ತೊಗರಿಯನ್ನು ರಾಜ್ಯ ಸರ್ಕಾರ ಬೆಂಬಲ ಬೆಲೆ ನೀಡಿ ಖರೀದಿಗೆ ಮುಂದಾಗಿತ್ತು. ಒಬ್ಬ ರೈತನಿಂದ 20 ಕ್ವಿಂಟಲ್ ತೊಗರಿ ಮಾತ್ರ ಖರೀದಿಸಿತ್ತು. ಇದು ರೈತರ ಅಸಮಾಧಾನಕ್ಕೂ ಕಾರಣವಾಗಿತ್ತು. ಉಳಿದ ತೊಗರಿಯನ್ನು ಕೇಳಿದ ಬೆಲೆಗೆ ನೀಡಿ ಸುಮ್ಮನಾಗಿದ್ದರು. ಈ ಬಾರಿ ಸಹ ಈ ಸ್ಥಿತಿ ಮತ್ತಷ್ಟು ಜಾಸ್ತಿಯಾಗಲಿದೆ. ಪ್ರತಿ ರೈತ ನೂರಾರು ಕ್ವಿಂಟಲ್ ಲೆಕ್ಕದಲ್ಲಿ ತೊಗರಿ ಬೆಳೆಯ ನಿರೀಕ್ಷೆಯಲ್ಲಿದ್ದಾನೆ. ಸರ್ಕಾರ ಈ ಬಾರಿ ಬೆಂಬಲ ಬೆಲೆ ಜೊತೆ ಬೆಳೆದ ಎಲ್ಲ ತೊಗರಿ ಖರೀದಿಸಬೇಕು ಎನ್ನುವ ಬೇಡಿಕೆ ರೈತ ವರ್ಗದಿಂದ ಈಗಲೇ ಕೇಳಿ ಬಂದಿದೆ.