ವಿಜಯಪುರ: ಫಸಲ್ ಭೀಮಾ ಯೋಜನೆಯಡಿ ಪರಿಹಾರ ಹಾಗೂ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡುವಂತೆ ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಅತಿವೃಷ್ಟಿ ಹಾಗೂ ಅನಾವೃಷ್ಟಿಗೆ ಸಿಲುಕಿ ಅಪಾರ ಪ್ರಮಾಣದ ಬೆಳೆಗಳು ಹಾಳಾಗಿದ್ದು, ಫಸಲ್ ಭೀಮಾ ಯೋಜನೆ ಅಡಿ ಈಗಾಗಲೇ ರೈತರಿಂದ ಹಣ ತುಂಬಿಸಿಕೊಂಡಿದ್ದಾರೆ. ಆದರೆ, ವಿಮಾ ಕಂಪನಿಯವರು ಸರಿಯಾಗಿ ರೈತರಿಗೆ ಬೆಳೆ ಪರಿಹಾರ ಒದಗಿಸುತ್ತಿಲ್ಲ. ಇನ್ನು ಕೆಲವು ಭಾಗದಲ್ಲಿ ಒಬ್ಬರಿಗೆ ಪರಿಹಾರ ಕೊಟ್ಟು ಇನ್ನೊಬ್ಬರಿಗೆ ಪರಿಹಾರ ನೀಡುತ್ತಿಲ್ಲ. ವಿಮಾ ಕಂಪನಿಯವರು ರೈತರಿಗೆ ತಾರತಮ್ಯ ಮಾಡುತ್ತಿದ್ದು, ವಿಮೆ ತುಂಬಿದ ರೈತರು ಸಂಕಷ್ಟಕ್ಕೂಳಗಾಗಿದ್ದಾರೆ. ಹಾಗಾಗಿ ಶೀಘ್ರವೇ ರೈತರಿಗೆ ಪರಿಹಾರ ಹಣ ನೀಡುವಂತೆ ರೈತ ಸಂಘಟನೆ ಕಾರ್ಯಕರ್ತರು ಒತ್ತಾಯಿಸಿದರು.
ಇನ್ನು ಜಿಲ್ಲೆಯಲ್ಲಿ ಶೇಂಗಾ, ತೊಗರಿ, ಮೆಕ್ಕೆಜೋಳ ಸೇರಿದಂತೆ ಹಲವು ಬೆಳೆಗಳನ್ನು ಬೆಳೆಯುತ್ತಿದ್ದು, ಸರ್ಕಾರ ಮಾತ್ರ ಇದುವರೆಗೂ ಸರಿಯಾದ ಬೆಂಬಲ ಬೆಲೆ ನಿಗದಿ ಮಾಡಿಲ್ಲ. ಇತ್ತ ಅತಿಯಾದ ಮಳೆಯಿಂದ ರೈತರ ಬೆಳೆಗಳು ನಾಶವಾಗುತ್ತಿದ್ದು, ಇರುವ ಅಲ್ಪಸ್ವಲ್ಪ ಬೆಳೆಯನ್ನು ಉಳಿಸಿಕೊಳ್ಳುವುದು ಕೃಷಿಕರಿಗೆ ಸವಾಲಿನ ಕೆಲಸವಾಗಿದೆ. ಸರ್ಕಾರ ಪ್ರತಿ ಕಿಂಟಾಲ್ ತೊಗರಿಗೆ 8,000 ರೂ., ಮೆಕ್ಕೆಜೋಳಕ್ಕೆ 2,500 ರೂ., ಶೇಂಗಾಕ್ಕೆ 8,000 ರೂ ನಿಗದಿ ಸೇರಿದಂತೆ ಹಲವು ಬೆಳೆಗಳಿಗೆ ತಕ್ಷಣವೇ ರಾಜ್ಯ ಹಾಗೂ ಕೇಂದ್ರ ಸರ್ಕಾರ ಬೆಂಬಲ ಬೆಲೆ ನಿಗದಿ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.