ಮುದ್ದೇಬಿಹಾಳ : ತಾಲೂಕಿನ ಹಳ್ಳೂರ ಗ್ರಾಮದ ಚಂದಪ್ಪ ದೊಡಮನಿ ಎಂಬ ರೈತ ಮಾವಿನ ಸಸಿಗಳನ್ನು ಕೇಳಿಕೊಂಡು ತೋಟಗಾರಿಕೆ ಕಚೇರಿಗೆ ಬಂದಿದ್ದರು. ಈ ವೇಳೆ ಅವರನ್ನು ಗೇಟ್ ನಲ್ಲಿಯೇ ತಡೆದು ನಿಲ್ಲಿಸಿದ್ದ ಸಿಬ್ಬಂದಿಯೊಬ್ಬರು ಮಾವಿನ ಸಸಿ ಬಂದಿಲ್ಲ ಎಂದು ಹೇಳಿದರಲ್ಲದೇ ಪದೇಪದೆ ಕಚೇರಿಗೆ ಏಕೆ ಬರುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ ಎಂದು ರೈತ ಚಂದಪ್ಪ ದೊಡಮನಿ ಎಂಬುವರು ಆರೋಪಿಸಿದರು.
ಇದರಿಂದ ಆಕ್ರೋಶಗೊಂಡ ರೈತ, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತೋಟಗಾರಿಕೆ ಸಹಾಯಕ ಅಧಿಕಾರಿ ವಿನೋದ್ ನಾಯಕ್ ಸ್ಥಳಕ್ಕಾಗಮಿಸಿ ರೈತನ ಬೇಡಿಕೆ ಬಗ್ಗೆ ತಿಳಿದುಕೊಂಡು ಅವರಿಗೆ ತಿಳಿ ಹೇಳುವ ಮೂಲಕ ವಾಪಸ್ ಕಳುಹಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ರೈತ ಚಂದಪ್ಪ ದೊಡಮನಿ, ರಿಯಾಯಿತಿ ದರದಲ್ಲಿ ಮಾವಿನ ಸಸಿಗಾಗಿ ಮೂರ್ನಾಲ್ಕು ಸಲ ಕಚೇರಿಗೆ ಅಲೆದಾಡುತ್ತಿದ್ದೇನೆ. ಪ್ರತಿ ಬಾರಿಯೂ ಮಾವಿನ ಸಸಿ ಬಂದಿಲ್ಲವೆಂದು ಹೇಳುತ್ತಾರೆ ಎಂದು ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಅಧಿಕಾರಿ ವಿನೋದ ನಾಯಕ್, ಸರ್ಕಾರ ಅನುದಾನ ಕೊಟ್ಟಿಲ್ಲ. ಅದಕ್ಕಾಗಿ ಸಸಿ ವಿತರಣೆ ಆಗಿಲ್ಲ. ಸಸಿ ಬಂದ ನಂತರ ನೇರವಾಗಿ ರೈತನಿಗೆ ದೂರವಾಣಿ ಕರೆ ಮಾಡಿ ತಿಳಿಸಲಾಗುತ್ತದೆ ಎಂದು ಹೇಳಿದರು.