ವಿಜಯಪುರ: 2022-23ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ರಾಜ್ಯದ ನಾಲ್ವರು 625ಕ್ಕೆ 625 ಅಂಕ ಗಳಿಸಿ ಟಾಪರ್ ಆಗಿ ಮಿಂಚಿದ್ದಾರೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ನಾಗರಬೆಟ್ಟದ ಎಸ್ಡಿವಿವಿ ಸಂಘದ ಆಕ್ಸ್‌ಫರ್ಡ್ ಶಾಲೆಯ ವಿದ್ಯಾರ್ಥಿ ಭೀಮನಗೌಡ ಬಿರಾದಾರ ಪ್ರಥಮ ಸ್ಥಾನ ಗಳಿಸಿ ಜಿಲ್ಲೆಗೆ ಹಿರಿಮೆ ತಂದಿದ್ದಾರೆ.
ಒಟ್ಟು ಶೇ 91.23 ರಷ್ಟು ಫಲಿತಾಂಶ ಪಡೆದು, ವಿಜಯಪುರ ಜಿಲ್ಲೆ 11ನೇ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷ ಶೇ. 87.54ರಷ್ಟು ಫಲಿತಾಂಶ ಪಡೆದು 12ನೇ ಸ್ಥಾನದಲ್ಲಿತ್ತು. ಒಟ್ಟಾರೆ ಶೇ. 3.69ರಷ್ಟು ಫಲಿತಾಂಶ ಏರಿಕೆಯಾಗಿದೆ. ಜಿಲ್ಲೆಯಲ್ಲಿ 40,448 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ 36,898 ವಿದ್ಯಾರ್ಥಿಗಳು ಉತ್ತೀರ್ಣವಾಗುವ ಮೂಲಕ ಜಿಲ್ಲೆಯಲ್ಲಿ ಉತ್ತಮ ಫಲಿತಾಂಶಕ್ಕೆ ಕಾರಣವಾಗಿದ್ದಾರೆ.
ಈ ಕುರಿತು ಸಂತೋಷ ಹಂಚಿಕೊಂಡಿರುವ ಡಿಡಿಪಿಐ ಉಮೇಶ ಶಿರಹಟ್ಟಿಮಠ, ಪರೀಕ್ಷೆ ಫಲಿತಾಂಶ ಈ ಮಟ್ಟಕ್ಕೆ ಬರುತ್ತದೆ ಎಂದು ನಿರೀಕ್ಷಿರಲಿಲ್ಲ. 5 ಅಥವಾ 6ನೇ ಸ್ಥಾನ ರಾಜ್ಯದಲ್ಲಿ ಪಡೆಯಬಹುದು ಎಂದು ಅಂದಾಜಿಸಲಾಗಿತ್ತು. 11ನೇ ಸ್ಥಾನ ಬಂದಿದೆ. ಜಿಲ್ಲೆಯ ಮಟ್ಟಕ್ಕೆ ಇದು ಖುಷಿಯ ವಿಚಾರವಾಗಿದ್ದು, ನಮ್ಮ ಜಿಲ್ಲೆಯ ವಿದ್ಯಾರ್ಥಿ ಭೀಮನಗೌಡ ಬಿರಾದಾರ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ. ಆತನಿಗೆ ಅಭಿನಂದನೆ ತಿಳಿಸುತ್ತೇನೆ ಎಂದರು.
'ಈಟಿವಿ ಭಾರತ' ಜೊತೆ ಮಾತನಾಡಿದ ಸಾಧಕ ವಿದ್ಯಾರ್ಥಿ ಭೀಮನಗೌಡ ಬಿರಾದಾರ, ''ನಾನು ಬಾಗಲಕೋಟೆ ಜಿಲ್ಲೆಯ ಬುದ್ನಿ ಬಿ.ಕೆ. ಗ್ರಾಮದವನು. ನಾಗರಬೆಟ್ಟೆದ ಆಕ್ಸ್‌ಫರ್ಡ್ ಶಾಲೆಯ ವಸತಿ ನಿಲಯದಲ್ಲಿ ಇದ್ದು ಅಭ್ಯಾಸ ಮಾಡುತ್ತಿದ್ದೆ. ದಿನಕ್ಕೆ 14 ರಿಂದ 15 ಗಂಟೆ ಓದುತ್ತಿದ್ದೆ. ಶಾಲೆಯಲ್ಲಿ ಶಿಕ್ಷಕರು ಹೇಳಿಕೊಟ್ಟ ಪಾಠ ಬಿಟ್ಟು ಯಾವುದೇ ಟ್ಯೂಶನ್ಗೆ ಹೋಗಿಲ್ಲ, ಉತ್ತಮ ಮಾರ್ಕ್ಸ್ ಪಡೆದುಕೊಳ್ಳುವೆ ಎಂಬ ನಿರೀಕ್ಷೆ ನನಗೆ ಇತ್ತು. ಆದರೆ ರಾಜ್ಯಕ್ಕೆ ಪ್ರಥಮ ಬಂದಿರುವುದು ಬಹಳ ಖುಷಿ ಆಗಿದೆ. ನಮ್ಮ ತಂದೆ ಕೃಷಿಕರಾಗಿದ್ದು, ಅವರ ಪ್ರೋತ್ಸಾಹದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ'' ಎಂದು ಹೇಳಿದ್ದಾರೆ.
ಎಸ್ಎಸ್ಎಲ್ಸಿ ಪರೀಕ್ಷೆಗೆ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳನ್ನು ಆನ್ಲೈನ್ ಮೂಲಕ ವಿಶೇಷವಾಗಿ ಅವರನ್ನು ಪರೀಕ್ಷೆಗೆ ಸಿದ್ಧತೆ ಮಾಡಲಾಗಿತ್ತು. ಶಿಕ್ಷಕರು ಕಠಿಣ ವಿಷಯಗಳನ್ನು ಗುರುತು ಮಾಡಿಕೊಂಡು ಅದನ್ನು ವಿದ್ಯಾರ್ಥಿಗಳಿಗೆ ಸತತವಾಗಿ ತಿಳಿಸುವ ಮೂಲಕ ವಿದ್ಯಾರ್ಥಿಗಳು ಹೆಚ್ಚಿನ ಪರಿಶ್ರಮ ಪಟ್ಟು ಓದುವಂತೆ ಮಾಡಿದ ಕಾರಣ ಉತ್ತಮ ಫಲಿತಾಂಶ ಬರಲು ಕಾರಣವಾಗಿದೆ ಎಂದರು.
ಇದನ್ನೂ ಓದಿ: SSLCಯಲ್ಲಿ ಶೇ 83.89 ಫಲಿತಾಂಶ: ನಾಲ್ವರಿಗೆ 625ಕ್ಕೆ 625! ಚಿತ್ರದುರ್ಗ ಫಸ್ಟ್; ಯಾದಗಿರಿ ಲಾಸ್ಟ್