ಮುದ್ದೇಬಿಹಾಳ: ರೈತನೊಬ್ಬ ನೇಣಿಗೆ ಶರಣಾದ ಘಟನೆ ತಾಲೂಕಿನ ಹಳ್ಳೂರ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಮಲ್ಲಪ್ಪ ಶಿವಪ್ಪ ಯರಗಲ್ ಉರ್ಫ್ ಡಮನಾಳ (51) ನೇಣಿಗೆ ಶರಣಾಗಿರುವ ರೈತ. ಇವರು ಹಳ್ಳೂರ ಗ್ರಾಮದಲ್ಲಿ ಮೂರು ಎಕರೆ ಜಮೀನಿನಲ್ಲಿ ತೊಗರಿ ಬೆಳೆ ಹಾಕಿದ್ದರು. ಆದರೆ ಜಮೀನು ತಗ್ಗು ಪ್ರದೇಶದಲ್ಲಿದ್ದ ಕಾರಣ ಬೆಳೆ ಸರಿಯಾಗಿ ಬೆಳೆದಿರಲಿಲ್ಲ ಎನ್ನಲಾಗಿದೆ.
ಮಂಗಳವಾರ ರಾತ್ರಿ ಗ್ರಾಮದಲ್ಲಿ ಜಾತ್ರೆ ಅಂಗವಾಗಿ ಏರ್ಪಡಿಸಿದ್ದ ಡೊಳ್ಳಿನ ಪದಗಳ ಕಾರ್ಯಕ್ರಮ ನೋಡಲೆಂದು ಮನೆಯಿಂದ ಹೊರ ಹೋದ ಈ ರೈತ ಬೆಳಗ್ಗೆ ಜಮೀನಿನ ಬೇವಿನ ಮರದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ನೇಣು ಹಾಕಿಕೊಂಡಿದ್ದರೂ ಕಾಲುಗಳು ಗಿಡದ ಮೇಲೆ ಒತ್ತಿ ಹಿಡಿದಂತೆ ಗೋಚರಿಸಿದ್ದು ಮರ್ಮಾಂಗಕ್ಕೆ ಪೆಟ್ಟಾಗಿ ಜೀವ ಹೋಗಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದರೂ ಪೊಲೀಸರ ತನಿಖೆ ಬಳಿಕ ಸತ್ಯಾಂಶ ಹೊರ ಬರಲಿದೆ.
ಮೃತರು ಢವಳಗಿ ಸಿಂಡಿಕೇಟ್ ಬ್ಯಾಂಕಿನಲ್ಲಿ 75 ಸಾವಿರ, ಎಲ್ & ಟಿ ಫೈನಾನ್ಸ್ ನಲ್ಲಿ 40 ಸಾವಿರ ರೂ. ಸಾಲ ಮಾಡಿದ್ದಾರೆ. ಮೃತ ರೈತನಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ. ಘಟನಾ ಸ್ಥಳಕ್ಕೆ ಪಿಎಸೈ ಎಂ.ಬಿ. ಬಿರಾದಾರ ಭೇಟಿ ನೀಡಿದ್ದು, ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.