ಮುದ್ದೇಬಿಹಾಳ : ಒಂದೆಡೆ ಕೊರೊನಾ ವೈರಸ್ ಹಾವಳಿ, ಮತ್ತೊಂದೆಡೆ ಹೊಲದಲ್ಲಿ ಬೆಳೆದಿರುವ ಬೆಳೆಗಳಿಗೆ ಹುಳುಗಳ ಬಾಧೆ. ಇದರಿಂದ ಕಂಗಾಲಾಗಿರುವ ರೈತ ಬಿತ್ತನೆಗೆ ಮಾಡಿರುವ ಖರ್ಚು ವಾಪಸ್ಸಾಗದೇ ಸಾಲದ ಸುಳಿಯಲ್ಲಿ ಸಿಲುಕುವ ಆತಂಕ ಎದುರಾಗಿದೆ.
ಮುಂಗಾರು ಹಂಗಾಮಿನಲ್ಲಿ ರೈತರು ಆಹಾರ ಬೆಳೆಯನ್ನಾಗಿ ಸಜ್ಜೆ ಬಿತ್ತನೆ ಮಾಡಿದ್ದು, ಇನ್ನೇನು ಫಸಲು ಕೈಗೆ ಬರುತ್ತದೆ ಎಂದು ಸಂತಸಗೊಂಡಿದ್ದರು. ಆದರೆ, ಬೆಳೆಗೆ ತಗುಲಿರುವ ಹುಳದ ಬಾಧೆ ರೈತರನ್ನ ಚಿಂತಾಕ್ರಾಂತರನ್ನಾಗಿಸಿದೆ. ಸಜ್ಜೆ ಬೆಳೆ ಇನ್ನೂ ಒಂದೂವರೆ ತಿಂಗಳ ಅವಧಿಯಲ್ಲಿ ರೈತನ ಕೈಗೆ ಬರಲಿದೆ. ಆದರೆ, ಸಜ್ಜೆ ಬೆಳೆಯ ಕಾಳುಗಳಿಗೆ ಬಿದ್ದಿರುವ ಹುಳುಗಳು ಎಲ್ಲವನ್ನೂ ತಿಂದು ತೇಗಲು ಆರಂಭಿಸಿವೆ.
ತಾಲೂಕಿನ ಕುಂಟೋಜಿ ವ್ಯಾಪ್ತಿಯಲ್ಲಿ ಬರುವ ಬಸಲಿಂಗಪ್ಪ ಹೂಗಾರ ಎಂಬ ರೈತನ ಹೊಲದಲ್ಲಿ ಈ ಹುಳುಗಳ ಬಾಧೆ ವಿಪರೀತವಾಗಿ ಕಂಡು ಬಂದಿದೆ. ತೆನೆಗೆ 8-10 ಹುಳುಗಳು ಕಂಡು ಬಂದಿವೆ. ಇದನ್ನು ಕಂಡಿರುವ ರೈತ ಮುಂದೇನು ಮಾಡುವುದು ಎಂಬ ಚಿಂತೆಯಲ್ಲಿ ಮುಳುಗಿದ್ದಾನೆ. ಕೃಷಿ ಇಲಾಖೆಯ ಅಧಿಕಾರಿಗಳು, ತಜ್ಞರು, ವಿಜ್ಞಾನಿಗಳು ಸಜ್ಜೆಗೆ ತಗುಲಿರುವ ಈ ಕೀಟದ ನಿರ್ವಹಣೆ ಹೇಗೆ ಎಂಬುದನ್ನು ರೈತರಿಗೆ ತಿಳಿಸಿಕೊಡುವ ಕೆಲಸ ಮಾಡಬೇಕಿದೆ.
ಅವಳಿ ತಾಲೂಕಿನಲ್ಲಿ ಬಿತ್ತನೆ ಎಷ್ಟು?: ಜೋಳ ಬಿಟ್ಟರೆ ಸಜ್ಜೆಯನ್ನು ಪರ್ಯಾಯವಾಗಿ ಬೆಳೆಯುವ ಉತ್ತರ ಕರ್ನಾಟಕದ ರೈತರು ಅದನ್ನು ಆಹಾರ ಬೆಳೆಯನ್ನಾಗಿ ಉಪಯೋಗಿಸುತ್ತಿದ್ದಾರೆ. ಮುದ್ದೇಬಿಹಾಳ ಕ್ಷೇತ್ರ ವ್ಯಾಪ್ತಿಯಲ್ಲಿರುವ ನಾಲ್ಕು ಹೋಬಳಿಗಳಲ್ಲಿ 2020-21ನೇ ಸಾಲಿನ ಮುಂಗಾರು ಹಂಗಾಮಿನ ನೀರಾವರಿ ಕ್ಷೇತ್ರದಲ್ಲಿ 745 ಹೆಕ್ಟೇರ್, ಮಳೆಯಾಶ್ರಿತ ಕ್ಷೇತ್ರದಲ್ಲಿ 5701 ಹೆಕ್ಟೇರ್ ಸೇರಿ ಒಟ್ಟು 6446 ಹೆಕ್ಟೇರ್ ಪ್ರದೇಶದಲ್ಲಿ ಸಜ್ಜೆಯನ್ನು ಬಿತ್ತನೆ ಮಾಡಲಾಗಿದೆ ಎಂದು ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ರಾಜೇಶ್ವರಿ ನಾಡಗೌಡ ಮಾಹಿತಿ ನೀಡಿದರು.