ಯಾದಗಿರಿ: ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡಿದವರನ್ನು ಎನ್‌ಕೌಂಟರ್ ಮಾಡಿಸಿ ಎಂದು ಹೇಳಿದ್ದೇನೆ. ಬರೀ ಅವರ ಧಮ್ ಇವರು ಧಮ್ ನೋಡುವುದಲ್ಲ. ಪೊಲೀಸರಿಗೆ ಸ್ವಾತಂತ್ರ್ಯ ನೀಡಿ ನಮ್ಮ ಧಮ್ ತೋರಿಸಬೇಕು. ಒಂದಕ್ಕೆ ನಾಲ್ಕು ಹೊಡೆದು ಧಮ್ ತೋರಿಸಬೇಕು. ಒಂದು ವೇಳೆ ಈ ಮಾತನ್ನು ತಿಳಿದುಕೊಳ್ಳದಿದ್ದರೆ ಮುಂದೆ ನಮ್ಮ ಧಮ್ ತೋರಿಸುತ್ತೇವೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ನಿನ್ನೆ ಯಾದಗಿರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಧಮ್ ಬಗ್ಗೆ ಕೇಳಬೇಡಿ, ಧಮ್ ಇದ್ದರೆ ಹಿಂದು ಕಾರ್ಯಕರ್ತರನ್ನು ಹತ್ಯೆ ಮಾಡಿದವರನ್ನು ಎನ್‌ಕೌಂಟರ್ ಮಾಡಿ, ಧಮ್ ಗೊತ್ತಾಗುತ್ತದೆ. ರಾಜ್ಯದಲ್ಲಿ ಹಿಂದು ಕಾರ್ಯಕರ್ತರ ಹತ್ಯೆಯಾಗುತ್ತಿದೆ. ಕಾರ್ಯಕರ್ತರಿಗೆ ಸರಿಯಾಗಿ ರಕ್ಷಣೆ ಇಲ್ಲದಂತಾಗಿದೆ. ರಾಜ್ಯದಲ್ಲಿ ನಮ್ಮ ಸರ್ಕಾರವಿದ್ದರೂ ಸಿಎಂ, ಗೃಹ ಮಂತ್ರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದೇನೆ ಎಂದರು.
ಹಿಂದು ಪರ ಮಾತನಾಡಿದವರಿಗೆ ವೋಟ್ ಹಾಕಬೇಕೆ ವಿನಃ ಅನ್ಯ ಧರ್ಮದ ಪರ ಮಾತನಾಡುವವರಿಗೆ ಅಲ್ಲ. ವಿಜಯಪುರದಲ್ಲಿ 2.5 ಲಕ್ಷ ಮತಗಳಲ್ಲಿ 1 ಲಕ್ಷ ಜನರು ಅವರಿದ್ದಾರೆ ಎಂದು ಹೇಳುವ ಮೂಲಕ ಅನ್ಯ ಧರ್ಮಿಯರ ಮತಗಳು ತಮಗೆ ಬೇಡ ಎಂದು ಪರೋಕ್ಷವಾಗಿ ಹೇಳಿದರು. ದೇಶದಲ್ಲಿ ಇನ್ನೂ 20 ವರ್ಷ ನರೇಂದ್ರ ಮೋದಿ ಅವರೇ ಪ್ರಧಾನಿಯಾಗಿರುತ್ತಾರೆ. ದೇಶದಲ್ಲಿ ಓವೈಸಿ ಯಾವ ಮಕ್ಕಳದು ನಡೆಯುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ನಂತರ ಜಿಲ್ಲೆಯ ಶಹಾಪುರ ಪಟ್ಟಣದಲ್ಲಿ ಹಿಂದು ಮಹಾಗಣಪತಿ ನಿಮಜ್ಜನ ಶೋಭಾಯಾತ್ರೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ನಡೆದ ಶೋಭಾಯಾತ್ರೆಯಲ್ಲಿ ಶಾಸಕ ಯತ್ನಾಳ್, ಶ್ರೀರಾಮ್ ಸೇನೆ ರಾಜ್ಯಾಧ್ಯಕ್ಷ ಆಂದೋಲ ಸಿದ್ದಲಿಂಗ ಸ್ವಾಮಿ ಭಾಗಿಯಾಗಿದ್ದರು. ಸುಬೇದಾರ್ ಆಸ್ಪತ್ರೆಯಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಶೋಭಾಯಾತ್ರೆ ನಡೆಯಿತು.
ಈ ಸಂದರ್ಭದಲ್ಲಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಮಾತನಾಡಿದ ಶಾಸಕ ಯತ್ನಾಳ್, ಕಾಶಿ ವಿಶ್ವನಾಥನ ಬಗ್ಗೆ ಮಂಗಳವಾರ ಕೋರ್ಟ್ ಆದೇಶ ನೀಡಿದೆ. ನಾವೆಲ್ಲರೂ ಶಿವನ ಭಕ್ತರು. ಪ್ರಧಾನಿ ಮೋದಿ ಕಾಲದಲ್ಲಿ ವಿಶ್ವನಾಥನು, ಮಥುರಾ ಕೃಷ್ಣನೂ ಮುಕ್ತನಾಗುತ್ತಾನೆ. ಎಲ್ಲೆಲ್ಲಿ ನಮ್ಮ ದೇವಾಲಯಗಳನ್ನು ಕೆಡವಿ ಮಸೀದಿ ಕಟ್ಟಿದ್ದಾರೋ ಅಲ್ಲಿ ಎಲ್ಲಾ ಜಾಗಗಳನ್ನು ಖುಲ್ಲಾ ಮಾಡುತ್ತೇವೆ. ಇನ್ನು ಮುಂದೆ ಯಾರು ಹಿಂದುಗಳ ಪರವಾಗಿ ಇರುತ್ತಾರೋ ಅವರು ಶಾಸಕರಾಗುತ್ತಾರೆ ಎಂದು ಯತ್ನಾಳ್ ಅಭಿಪ್ರಾಯಪಟ್ಟರು.
ಇದನ್ನೂ ಓದಿ: ನರೇಂದ್ರ ಮೋದಿ ಹುಟ್ಟಿರೋದೆ ಹಿಂದೂರಾಷ್ಟ್ರ ನಿರ್ಮಾಣಕ್ಕೆ.. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್