ವಿಜಯಪುರ: ನಗರದ ಲಾಲ್ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದು, ವೈಯರ್‌ಗಳಿಗೆ ಬೆಂಕಿ ತಗುಲಿದೆ. ಆದರೆ ವ್ಯಾಪಾರಸ್ಥರ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ.
ಇದ್ದಕ್ಕಿದ್ದಂತೆ ಮಾರುಕಟ್ಟೆಯ ಮಳಿಗೆ ಮೇಲ್ಭಾದಲ್ಲಿ ವಿದ್ಯುತ್ ವೈಯರ್‌ಗಳಲ್ಲಿ ಬೆಂಕಿ ಹತ್ತಿಕೊಂಡಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ಗೊಳ್ಳುತ್ತಿದ್ದಂತೆ ಮಾರುಕಟ್ಟೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಬೆಂಕಿ ಕಾಣಿಸಿಕೊಂಡ ಸ್ಥಳದ ಕೆಳಭಾಗದಲ್ಲಿ ಸುಮಾರು 10ಕ್ಕೂ ಅಧಿಕ ಬಟ್ಟೆ ವ್ಯಾಪಾರ ಮಳಿಗೆಗಳಿದ್ದು, ಸ್ವಲ್ಪ ಯಾಮಾರಿದ್ರೂ ಎಸ್‌ಬಿಎಸ್ ಮಾರುಕಟ್ಟೆ ಸುತ್ತಲೂ ಬೆಂಕಿ ಆವರಿಸುತ್ತಿತ್ತು.
ಆದರೆ ವ್ಯಾಪಾರಿಗಳು ಸಮಯ ಪ್ರಜ್ಞೆಯಿಂದ ತಕ್ಷಣವೇ ವಿದ್ಯುತ್ ಫ್ಯೂಸ್ ತೆಗೆದು ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವುದು ದೊಡ್ಡ ಮಟ್ಟದ ಅನಾಹುತ ತಪ್ಪಿಸಿದಂತಾಗಿದೆ.
ನಗರದ ದೊಡ್ಡ ಲಾಲ್ ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆ 450 ವ್ಯಾಪಾರ ಮಳಿಗೆ ಹೊಂದಿರುವ ಮಾರುಕಟ್ಟೆಯಾಗಿದ್ದು, ಇಲ್ಲಿಗೆ ದಿನವಿಡೀ ಸಾವಿರಾರು ಜನ ಭೇಟಿ ನೀಡುತ್ತಾರೆ. ಮಹಾನಗರ ಪಾಲಿಕೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವೇ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಲು ಕಾರಣವೆಂದು ವ್ಯಾಪಾರಸ್ಥರು ದೂರುತ್ತಿದ್ದಾರೆ.
ಕಳೆದ ಹಲವು ತಿಂಗಳಿಂದ ಮಾರುಕಟ್ಟೆ ವೈರಿಂಗ್ ಮಾಡುವಂತೆ ಹಲವು ಬಾರಿ ಮನವಿ ಮಾಡಿದ್ದರೂ, ಅಧಿಕಾರಿಗಳು ಮಾತ್ರ ನಮಗೂ ಇದಕ್ಕೂ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ ಎಂದು ಮಾರುಕಟ್ಟೆ ವ್ಯಾಪಾರಿಗಳು ಆರೋಪಿಸುತ್ತಿದ್ದಾರೆ.
ಮಾರುಕಟ್ಟೆ ಅವ್ಯವಸ್ಥೆ ಕುರಿತು ಕಳೆದ ವಾರವಷ್ಟೇ ಈ ಟಿವಿ ಭಾರತದಲ್ಲಿ ವರದಿ ಮಾಡಲಾಗಿತ್ತು. ಇನ್ನಾದ್ರೂ ಅಧಿಕಾರಿಗಳು ಎಚ್ಚೆತ್ತು ಮಾರುಕಟ್ಟೆ ಅಭಿವೃದ್ಧಿಗೆ ಒತ್ತು ನೀಡಬೇಕಿದೆ.