ವಿಜಯಪುರ: ಚುನಾವಣಾ ಕರ್ತವ್ಯಕ್ಕಾಗಿ ಹೊರಟಿದ್ದ ಬಸ್ ಪಲ್ಟಿಯಾಗಿರುವ ಘಟನೆ ಮುದ್ದೇಬಿಹಾಳ ತಾಲೂಕಿನ ಹಳ್ಳೂರು ಕ್ರಾಸ್ ಬಳಿ ಇಂದು ಬೆಳಗ್ಗೆ 7.30 ಗಂಟೆಯ ಸುಮಾರಿಗೆ ನಡೆದಿದೆ. ಘಟನೆಯಲ್ಲಿ 15ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಸಿಂಧಗಿ ವಿಧಾನಸಭಾ ಕ್ಷೇತ್ರದ ಮತಕೇಂದ್ರದ ತರಬೇತಿಗಾಗಿ ಸಿಬ್ಬಂದಿಯನ್ನು ಸಿಂಧಗಿಗೆ ಕರೆದೊಯ್ಯಲಾಗುತ್ತಿತ್ತು. ಬಸ್ನ ಎಕ್ಸಲ್ ಕಟ್ ಆಗಿದ್ದು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ಮೂಲಗಳು ತಿಳಿಸಿವೆ.
ಬಸ್‌ನಲ್ಲಿ ಒಟ್ಟು 40ಕ್ಕೂ ಅಧಿಕ ಜನ ಪ್ರಯಾಣಿಸುತ್ತಿದ್ದರು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷಯ ತಿಳಿದು ಮುದ್ದೇಬಿಹಾಳ ಚುನಾವಣಾಧಿಕಾರಿ ಚಂದ್ರಕಾಂತ ಪವಾರ್ ಗಾಯಾಳುಗಳ ನೆರವಿಗೆ ಧಾವಿಸಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕಾರಿಗೆ ಬೈಕ್ ಡಿಕ್ಕಿ ಇಬ್ಬರು ಸಾವು: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿ ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಲ್ಲಿಯ ಜಯಪುರ ಗೇಟ್ ಬಳಿ ಸೋಮವಾರ ನಡೆದಿದೆ. ಮೃತರನ್ನು ಬೆಂಗಳೂರಿನ ನಿವಾಸಿ ಯಾಸೀನ್(22), ಮಾಗಡಿ ನಿವಾಸಿ ರೆಹಮಾನ್ (18) ಎಂದು ಗುರುತಿಸಲಾಗಿದೆ. ಗಾಯಾಳುವಿನ ಗುರುತು ಇನ್ನೂ ಪತ್ತೆಯಾಗಿಲ್ಲ. ಬೈಕ್ ಸವಾರರು ಬೆಂಗಳೂರು ಮೂಲದವರು ಎಂದು ತಿಳಿದು ಬಂದಿದೆ.
ಬೆಂಗಳೂರಿನಿಂದ ಮೈಸೂರಿಗೆ ಒಂದೇ ದ್ವಿಚಕ್ರ ವಾಹನದಲ್ಲಿ ಮೂವರು ಪ್ರಯಾಣಿಸುತ್ತಿದ್ದರು. ಹೆದ್ದಾರಿ ಬದಿ ಕೆಟ್ಟು ನಿಂತಿದ್ದ ಕಾರಿಗೆ ಬೈಕ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಮೂವರು ನೆಲಕ್ಕುರುಳಿದ್ದು, ಹಿಂದಿನಿಂದ ಬಂದ ಕಾರೊಂದು ಮೂವರ ಮೇಲೂ ಹರಿದಿದೆ. ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಓರ್ವ ಗಂಭೀರ ಗಾಯಗೊಂಡಿದ್ದಾನೆ. ರಾಮನಗರ ಸಂಚಾರಿ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಇದೇ ಹೆದ್ದಾರಿಯಲ್ಲಿ ಒಂದೇ ಕುಟುಂಬದ ಐವರು ಅಪಘಾತದಲ್ಲಿ ಮೃತಪಟ್ಟಿದ್ದರು.
ಇದನ್ನೂ ಓದಿ: ನಿಂತಿದ್ದ ಕಾರಿಗೆ ಬೈಕ್ ಡಿಕ್ಕಿ: ಇಬ್ಬರು ಸಾವು, ಓರ್ವನ ಸ್ಥಿತಿ ಗಂಭೀರ