ಮುದ್ದೇಬಿಹಾಳ: ವಾಣಿಜ್ಯ ನಗರಿ ತಾಳಿಕೋಟಿ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ನ.10 ರಂದು ಚುನಾವಣೆ ನಿಗದಿಯಾಗಿದ್ದು, ನಿರೀಕ್ಷೆಯಂತೆ ಮೀಸಲಾತಿ ಅನ್ವಯ ಪಕ್ಷೇತರ ಸದಸ್ಯ ಸಂಗಮೇಶ ಇಂಗಳಗಿ ಅಧ್ಯಕ್ಷ ಸ್ಥಾನಕ್ಕೇರಲಿದ್ದಾರೆ.
ರಾಜ್ಯದ ಪುರಸಭೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಸರ್ಕಾರವು ಹೊರಡಿಸಿರುವ ಮಿಸಲಾತಿಗನುಗುಣವಾಗಿ ಚುನಾವಣೆ ನಿಗದಿಪಡಿಸಲಾಗಿದ್ದು, ಅದರಂತೆ ಅಧ್ಯಕ್ಷ ಸ್ಥಾನಕ್ಕೆ ಮೀಸಲಿರಿಸಿರುವ ಪರಿಶಿಷ್ಟ ಪಂಗಡದ ಏಕೈಕ ಬಿಜೆಪಿ ಪಕ್ಷದ ಬೆಂಬಲಿತ ಸದಸ್ಯ ಸಂಗಮೇಶ ಇಂಗಳಗಿ ಅಧಿಕಾರದ ಗದ್ದುಗೆ ಏರುವುದು ನಿಚ್ಚಳವಾಗಿದೆ.
ತಾಳಿಕೋಟೆ ಪುರಸಭೆಯ 23 ಸ್ಥಾನಗಳ ಪೈಕಿ ಬಿಜೆಪಿ ಹಾಗೂ ಕಾಂಗ್ರೇಸ್ ತಲಾ ಮೂವರು, ಜೆಡಿಎಸ್‌ನಿಂದ ಓರ್ವ ಸದಸ್ಯ ಚುನಾಯಿತರಾಗಿದ್ದು, 16 ಪಕ್ಷೇತರರು ಆಯ್ಕೆಯಾಗಿದ್ದರು. ಕೆಲವು ಪಕ್ಷೇತರ ಸದಸ್ಯರುಗಳು ಬಿಜೆಪಿ ಇನ್ನುಳಿದ ಕೆಲ ಸದಸ್ಯರು ಕಾಂಗ್ರೇಸ್ ಬೆಂಬಲಿತರೆಂದು ಗುರುತಿಸಿಕೊಂಡಿದ್ದಾರೆ.
ಎಸ್ಟಿ ಮೀಸಲಾತಿ ಅಡಿ ಆಯ್ಕೆಯಾಗಿರುವ ಸದಸ್ಯ ಸಂಗಮೇಶ ಇಂಗಳಗಿ ಒಬ್ಬರೇ ಆಯ್ಕೆಯಾಗಿದ್ದು, ಅಧ್ಯಕ್ಷ ಗಾದಿ ಸಲೀಸಾಗಿದೆ. ಕಳೆದ ವರ್ಷ ಮೀಸಲಾತಿ ಪ್ರಕಟಗೊಂಡ ಸಮಯದಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಸದ್ಯ ಸದಸ್ಯರುಗಳು ಬಣ ರಾಜಕಾರಣಕ್ಕೆ ಮುಂದಾಗಿರುವುದು ಕಂಡು ಬರುತ್ತಿದೆ. ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿಯಲ್ಲಿದ್ದ ಎರಡು ಬಣಗಳಿಗೆ ಸರ್ಕಾರ ಹೊರಡಿಸಿದ ಅಧ್ಯಕ್ಷ ಸ್ಥಾನದ ಮೀಸಲಾತಿ ನಿರಾಸೆಯುಂಟು ಮಾಡಿದ್ದರಿಂದ ಉಪಾಧ್ಯಕ್ಷ ಸ್ಥಾನ ಪೈಪೋಟಿಗೆ ಇಳಿದತೆ ಕಾಣತೊಡಗಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಯಾರು ಸ್ಪರ್ಧಿಸಲಿದ್ದಾರೆ ಎಂಬುದು ಕುತೂಹಲ ಮೂಡಿದೆ.
ತಡೆಯಾಜ್ಞೆ ಅರ್ಜಿ ಇತ್ಯರ್ಥ :
ತಾಳಿಕೋಟಿ ಪುರಸಭೆಯ ಅಧ್ಯಕ್ಷ ಮಿಸಲಾತಿಯನ್ನು ಪ್ರಶ್ನಿಸಿ ಬಿಜೆಪಿ ಪಕ್ಷದ ವಿರೋಧಿ ಬಣದ ಸದಸ್ಯರು ಪುರಸಭಾ ಸದಸ್ಯ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಅವರ ನೇತೃತ್ವದಲ್ಲಿ ಗುಲಬರ್ಗಾ ಉಚ್ಚನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಗೆ ತಡೆಯಾಜ್ಞೆ ಸಿಕ್ಕಿದೆ. ನ.2 ರಂದು ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿದ್ದು, ಸರ್ಕಾರದ ನಿಯಮದಂತೆ ಮೊದಲು ನಿರ್ಣಯಿಸಿರುವ ಮೀಸಲಾತಿಯಂತೆ ಅಥವಾ ಬದಲಾವಣೆ ಮಾಡಿಯಾದರೂ ಚುನಾವಣೆ ಜರುಗಸಬೇಕೆಂದು ಆದೇಶ ಹೊರಡಿಸಿದ್ದರಿಂದ, ಜಿಲ್ಲಾಧಿಕಾರಿಗಳ ಸೂಚನೆಯಂತೆ ಮೊದಲಿನ ಅಧ್ಯಕ್ಷ ಸ್ಥಾನದ ಪರಿಶಿಷ್ಟ ಪಂಗಡ ಮತ್ತು ಉಪಾಧ್ಯಕ್ಷ ಸಾಮಾನ್ಯ ವರ್ಗದವರಿಗೆ ಮೀಸಲಿರಿಸಿ ಚುನಾವಣೆ ನಡೆಸಲಾಗುತ್ತಿದೆ.