ವಿಜಯಪುರ: ವಯಸ್ಸು 81, 66 ಆದರೂ ಪದವಿ ಪಡೆಯಬೇಕೆಂಬ ತುಡಿತ ಅವರನ್ನು ಇಳಿವಯಸ್ಸಿನಲ್ಲೂ ಓದುವಂತೆ ಮಾಡಿ ಪರೀಕ್ಷೆ ಎದುರಿಸಿದ್ದಾರೆ. ಸರ್ಕಾರಿ ಸೇವೆಯಿಂದ ನಿವೃತ್ತರಾದ ನಂತರವೂ ಇಬ್ಬರು ಹಿರಿಯ ನಾಗರಿಕರು ಸ್ನಾತಕೋತ್ತರ ಪರೀಕ್ಷೆ ಬರೆದು ಹೊಸ ದಾಖಲೆ ನಿರ್ಮಿಸಿದ್ದಾರೆ. ನಾಲ್ಕು ಸ್ನಾತಕೋತ್ತರ ಪದವೀಧರ ವೃದ್ಧನೋರ್ವ ಐದನೇ ಪದವಿಗೆ ಪರೀಕ್ಷೆ ಬರೆದರೆ, ಇಂಗ್ಲಿಷ್ ಭಾಷಾ ಜ್ಞಾನಕ್ಕಾಗಿ ಮತ್ತೋರ್ವ ವೃದ್ಧ ಸ್ನಾತಕೋತ್ತರ ಪದವಿ ಪರೀಕ್ಷೆ ಎದುರಿಸಿ ಅಚ್ಚರಿ ಮೂಡಿಸಿದ್ದಾರೆ.
ನಗರದ ಬಿಎಲ್‍ಡಿಇ ಸಂಸ್ಥೆಯ ಜೆಎಸ್‍ಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಟಿಇಇ ಪರೀಕ್ಷೆಯಲ್ಲಿ ನಿಂಗಯ್ಯ ಬಸಯ್ಯ ಒಡೆಯರ್(81) ಎಂಬುವರು ಎಂಎ ಇಂಗ್ಲಿಷ್(ಎಂಇಜಿ) ಪರೀಕ್ಷೆ ಬರೆದಿದ್ದಾರೆ. ಆರೋಗ್ಯ ಇಲಾಖೆಯ ನಿವೃತ್ತ ನೌಕರರಾಗಿರುವ ಇವರು ಈಗಾಗಲೇ ಇಗ್ನೋದಿಂದ 4 ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇದೀಗ 5ನೇ ಸ್ನಾತಕೋತ್ತರ ಪದವಿಗಾಗಿ ಪರೀಕ್ಷೆ ಬರೆಯುತ್ತಿದ್ದಾರೆ.
ಸಿಂದಗಿಯ ಆರ್.ಡಿ. ಪಾಟೀಲ್ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದ 66 ವರ್ಷದ ಪರಸಪ್ಪ ಮಡಿವಾಳರ್, ಇದೀಗ ಇಂಗ್ಲಿಷ್ ಸ್ನಾತಕೋತ್ತರ ಪರೀಕ್ಷೆ ಬರೆಯುವ ಮೂಲಕ ಮಾದರಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಸರ್ಕಾರಿ ಸೇವಾ ನಿವೃತ್ತಿ ಎಂದರೆ ಅದು ಕೇವಲ ವೃತ್ತಿಗೆ ಮಾತ್ರವಾಗಿದೆ. ಜೀವನದಲ್ಲಿ ಜ್ಞಾನಾರ್ಜನೆ, ನಿರಂತರ ಚಟುವಟಿಕೆ ಹಾಗೂ ಕ್ರಿಯಾಶೀಲತೆಯಿಂದ ಇರಲು ಶೈಕ್ಷಣಿಕ ಜಾನ ಸಂಪಾದನೆ ಅತ್ಯಗತ್ಯ. ಹೀಗಾಗಿ ಈ ಇಬ್ಬರೂ ಹಿರಿಯ ನಾಗರಿಕರು ವಿದ್ಯಾರ್ಜನೆಯನ್ನು ಮುಂದುವರೆಸಿದ್ದಾರೆ. ನಗರದಲ್ಲಿರುವ ಇಗ್ನೋ ಕೇಂದ್ರದ ಸಂಯೋಜಕ ಡಾ.ಮಂಜುನಾಥ ಕೋರಿ, ಜೆಎಸ್‍ಎಸ್ ಶಿಕ್ಷಣ ಮಹಾ ವಿದ್ಯಾಲಯದ ಪ್ರಾಚಾರ್ಯೆ ಡಾ.ಭಾರತಿ ಖಾಸನೀಸ, ಸಂಸ್ಥೆಯ ಆಡಳಿತಾಧಿಕಾರಿ ಸೇರಿದಂತೆ ಇತರರು ಹಿರಿಯ ನಾಗರಿಕರ ಈ ವಿಶಿಷ್ಟ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಓದಿ: ಬೆಂಗಳೂರಲ್ಲಿ ವರ್ಕೌಟ್ ಸಮಯದಲ್ಲೇ ಕುಸಿದು ಬಿದ್ದ ಮಹಿಳೆ.. ಕ್ಷಣಾರ್ಧದಲ್ಲೇ ಹಾರಿಹೋಯ್ತು ಪ್ರಾಣ! ವಿಡಿಯೋ