ವಿಜಯಪುರ: ಕಳೆದ ಒಂದು ತಿಂಗಳಿಂದ ಭೂಕಂಪನದ ಅನುಭವ ಇಲ್ಲದೇ ನೆಮ್ಮದಿಯಾಗಿದ್ದ ಜಿಲ್ಲೆಯ ಜನತೆ ಕಳೆದ ತಡರಾತ್ರಿ ಹಾಗೂ ಇಂದು ಬೆಳಗಿನಜಾವ ಮತ್ತೆ ಭೂಕಂಪನದ ಅನುಭವಾಗಿ ಬೆಚ್ಚಿ ಬಿದ್ದಿದ್ದಾರೆ.
ಕಳೆದ ಮೂರು ದಿನಗಳಿಂದ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ ರಾತ್ರಿ 11.42ಕ್ಕೆ ಹಾಗೂ ಇಂದು ಬೆಳಗ್ಗೆ 6.19ಕ್ಕೆ ವಿಜಯಪುರ ನಗರದ ಹಲವೆಡೆ ಭೂಮಿ ಕಂಪಿಸಿದ ಅನುಭವ ಆಗಿದೆ. ಒಂದೇ ರಾತ್ರಿಯಲ್ಲಿ ಎರಡು ಬಾರಿ ಭೂಮಿ ಕಂಪಿಸಿದೆ. ನಗರದ ರೈಲ್ವೆ ಸ್ಟೇಷನ್ ಏರಿಯಾ, ರಂಭಾಪುರ ಬಡಾವಣೆ, ಬಸವೇಶ್ವರ ನಗರ, ಗೋಳಗುಮ್ಮಟ ಏರಿಯಾ ಸೇರಿದಂತೆ ಹಲವೆಡೆ ಭೂ ಕಂಪನದ ಅನುಭವವಾಗಿದೆ.
ರಾತ್ರಿ ಹಾಗೂ ಬೆಳ್ಳಂಬೆಳಗ್ಗೆ ಕಂಪನದಿಂದ ಜನತೆ ಬೆಚ್ಚಿಬಿದ್ದಿದ್ದಾರೆ. ಮನೆ ಹೊರಗಡೆ ಬಂದರೆ ಸತತವಾಗಿ ಜಿಟಿ ಜಿಟಿ ಮಳೆ, ಮನೆ ಒಳಗೆ ವಸ್ತುಗಳು ಅಲುಗಾಡಿದ ಹಾಗೆ ಜನರಿಗೆ ಗೋಚರವಾಗುತ್ತಿದ್ದು, ಏನು ಮಾಡಬೇಕು ಎನ್ನುವುದು ತೋಚದೇ ಹಲವದು ರಾತ್ರಿ ಇಡೀ ನಿದ್ದೆ ಇಲ್ಲದೇ ಕಳೆದಿದ್ದಾರೆ. ಪದೇ ಪದೇ ಆಗುತ್ತಿರುವ ಭೂಕಂಪನದಿಂದಾಗಿ ಜಿಲ್ಲೆಯ ಜನರಿಗೆ ನೆಮ್ಮದಿಯೇ ಇಲ್ಲದಂತಾಗಿದೆ.
ಈ ಬಗ್ಗೆ ಭೂಮಾಪನ ಕೇಂದ್ರದಿಂದ ಜಿಲ್ಲಾಡಳಿತಕ್ಕೆ ಯಾವುದೇ ಮಾಹಿತಿ ರವಾನೆಯಾಗಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಸಹ ಪರಿಶೀಲನೆ ನಡೆಸುತ್ತಿದೆ. ಜಿಲ್ಲೆಯಲ್ಲಿ ಪದೇ ಪದೇ ಭೂಕಂಪನದ ಅನುಭವವಾಗುತ್ತಿದ್ದರು ಸಹ ತಜ್ಞರು ಮಾತ್ರ ಇದು ಯಾವುದೇ ಜೀವ ಹಾನಿಯಾಗುವ ಮಟ್ಟಕ್ಕೆ ಇಲ್ಲ. ಅಂರ್ತಜಲ ಮಟ್ಟ ಹೆಚ್ಚಾಗಿರುವ ಕಾರಣ ಸ್ವಲ್ಪ ಪ್ರಮಾಣದಲ್ಲಿ ಈ ರೀತಿ ಭೂಮಿ ಕಂಪಿಸುವದು ಸಹಜ ಎನ್ನುತ್ತಾರೆ. ಆದರೆ ಜನ ಮಾತ್ರ ಸ್ವಲ್ಪ ಭೂಮಿ ಕಂಪಿಸಿದರೂ ಬೆಚ್ಚಿ ಬೀಳುತ್ತಿದ್ದಾರೆ.
ಇದನ್ನೂ ಓದಿ: ಶಿರಾಳಕೊಪ್ಪದಲ್ಲಿ ಕಂಪಿಸಿದ ಭೂಮಿ: ನಿದ್ದೆಯಿಂದ ಎದ್ದು ಹೊರಗೆ ಓಡಿ ಬಂದ ಜನ