ವಿಜಯಪುರ: ಒಂದು ವಾರದಿಂದ ರಾತ್ರಿ ಸಮಯದಲ್ಲಿ ಭೂಮಿಯಿಂದ ಸ್ಫೋಟ ರೀತಿಯ ಶಬ್ದ ಕೇಳಿ ಬರುತ್ತಿದ್ದು, ಇದರಿಂದ ಗ್ರಾಮಸ್ಥರು ಭಯಗೊಂಡಿರುವ ಘಟನೆ ಬಬಲೇಶ್ವರ ತಾಲೂಕಿನ ಅಡವಿ ಸಂಗಾಪೂರ ಗ್ರಾಮದಲ್ಲಿ ನಡೆದಿದೆ.
ಒಂದೇ ದಿನ ಮೂರು ಬಾರಿ ಭೂಮಿಯಿಂದ ಸ್ಪೋಟಕ ಶಬ್ದ ಕೇಳಿಬಂದಿದೆಯಂತೆ. ಅಲ್ಲದೆ ಭೂಮಿ ಕಂಪಿಸಿದ ಅನುಭವ ಬರುತ್ತಿದೆ ಎಂದು ಗ್ರಾಮಸ್ಥರು ಆತಂಕಗೊಂಡು ಮನೆಯಿಂದ ಹೊರ ಬರುತ್ತಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಬಬಲೇಶ್ವರ ತಹಶೀಲ್ದಾರ್ ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿ ಭೂಮಿಯಿಂದ ಸ್ಟೋಟದ ಶಬ್ದ ಕೇಳುತ್ತಿರುವ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ಬಳಿಕ ಈಟಿವಿ ಭಾರತದೊಂದಿಗೆ ಮಾತನಾಡಿದ ತಹಶೀಲ್ದಾರ್ ಮಲ್ಲಿಕಾರ್ಜುನ, ಭೂ ಕಂಪನ ಹಾಗೂ ಭೂಮಿಯ ಆಳದಿಂದ ಸ್ಟೋಟದ ಶಬ್ದ ಬರುತ್ತಿರುವ ಬಗ್ಗೆ ಗ್ರಾಮಸ್ಥರು ಹೇಳುತ್ತಿದ್ದಾರೆ. ಭೂ ಕಂಪನ ಬಗ್ಗೆ ಯಾವುದೇ ರಿಕ್ಟರ್ ಮಾಪನದಲ್ಲಿ ದಾಖಲಾಗಿಲ್ಲ. ತಜ್ಞರ ಕಡೆಯಿಂದ ಪರಿಶೀಲನೆ ನಡೆಸಿ ವರದಿ ಪಡೆದು ಗ್ರಾಮಸ್ಥರ ಭಯ ಹೋಗಲಾಡಿಸಲಾಗುವುದು ಎಂದರು.
ಒಟ್ಟಿನಲ್ಲಿ ಪ್ರವಾಹದ ಸಂಕಷ್ಟದಿಂದ ಈಗಷ್ಟೇ ಹೊರಬಂದ ಗ್ರಾಮಗಳಲ್ಲಿ ಭೂಮಿಯಿಂದ ಬರುತ್ತಿರುವ ಸ್ಪೋಟಕ ಶಬ್ದ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.