ವಿಜಯಪುರ : ಜಿಲ್ಲೆಯ ದೇವರ ಹಿಪ್ಪರಗಿ ತಾಲ್ಲೂಕಿನ ಪಡಗಾನೂರ ಗ್ರಾಮದಲ್ಲಿ ಭೂಮಿ ಕಂಪಿಸಿದ್ದು ಗ್ರಾಮಸ್ಥರು ಆತಂಕಗೊಂಡಿರುವ ಘಟನೆ ನಡೆದಿದೆ.
ಮೂರು ದಿನಗಳಿಂದ ಗ್ರಾಮದಲ್ಲಿ ರಾತ್ರಿ ವೇಳೆ ಭಾರಿ ಸದ್ದು ಮತ್ತು ಭೂಮಿ ನಡುಗಿದ ಅನುಭವವಾಗುತ್ತಿದೆ. ಇದರಿಂದ ಗ್ರಾಮಸ್ಥರು ರಾತ್ರಿ ವೇಳೆ ನಿದ್ದೆ ಮಾಡದೆ ಭಯದಲ್ಲಿ ಕಾಲ ಕಳೆಯುತ್ತಿದ್ದಾರೆ. ಮೊದಲ ದಿನ ಗ್ರಾಮದ ಸುತ್ತಮುತ್ತಲಿನ ಜಲ್ಲಿಕಲ್ಲಿನ ಕಾರ್ಖಾನೆ ಸದ್ದು ಇರಬಹುದೇನೋ ಎಂದು ಜನರು ಭಾವಿಸಿದ್ದರು. ಆದ್ರೆ ಈ ಬಗ್ಗೆ ಜಲ್ಲಿಕಲ್ಲು ಕಾರ್ಖಾನೆ ಮಾಲೀಕನನ್ನು ವಿಚಾರಿಸಿದರೆ, ನಾವು ಯಾವುದೇ ಸ್ಫೋಟ ಮಾಡಿಲ್ಲ ಎಂದು ಹೇಳಿದ್ದಾರೆ.
ಗ್ರಾಮದಲ್ಲಿ ಈಗ ನಾಲ್ಕು ದೊಡ್ಡ ಪ್ರಮಾಣದ ಸದ್ದು ಕೇಳಿಸಿದ್ದು, ಭೂಮಿ ನಡುಗಿದ್ದರಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿದೆ. ಏಕಾಏಕಿ ಮನೆಯಲ್ಲಿದ್ದ ಪಾತ್ರೆಗಳು ಕೆಳಗೆ ಬಿದ್ದಿವೆ. ಮಾತ್ರವಲ್ಲ, ಭೂಮಿ ಕಂಪಿಸಿದ ಶಬ್ಧದಿಂದ ಗ್ರಾಮದ ಕೆಲ ಮನೆಗಳಲ್ಲಿ ಬಿರುಕು ಕೂಡ ಕಾಣಿಸಿಕೊಂಡಿದೆ. ಯಾವುದೇ ಅನಾಹುತ ಆಗುವ ಮುನ್ನ ಜಿಲ್ಲೆಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.