ವಿಜಯಪುರ: ನೆಗಡಿ, ಕೆಮ್ಮು, ಜ್ವರ ಸೇರಿದಂತೆ ಇತರೆ ಕಾಯಿಲೆಯಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಸಂಬಂಧಿಸಿದ ಆಸ್ಪತ್ರೆಗಳು ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಸಭಾಭವನದಲ್ಲಿ ಆರೋಗ್ಯ ಅಧಿಕಾರಿಗಳು ಹಾಗೂ ಖಾಸಗಿ ವೈದ್ಯರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಜಂಟಿಯಾಗಿ ಕಾರ್ಯನಿರ್ವಹಿಸಿ ಆಸ್ಪತ್ರೆಗೆ ಬರುವ ರೋಗಿಗಳ ಮಾಹಿತಿ ಪಡೆದುಕೊಳ್ಳಬೇಕು. ಕೊರೊನಾ ಚಿಕಿತ್ಸೆಗೆ ಸಂಬಂಧಿಸಿದ ವ್ಯವಸ್ಥೆ ಮಾಡಬೇಕು. ಉಸಿರಾಟದ ತೊಂದರೆಯಿಂದ ಬರುವ ರೋಗಿಗಳಿಗೆ ವೈದ್ಯರ ಸಲಹೆ ಮೀರಿ ಹೋಗುವ ರೋಗಿಗಳ ಬಗ್ಗೆ ನೋಡಲ್ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಆಸ್ಪತ್ರೆಯಲ್ಲಿನ ವ್ಯವಸ್ಥೆಗಳ ಕುರಿತು ನಿರಂತರವಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ಒದಗಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲೆಯ ಅಲಮೀನ್, ಬಿಎಲ್ಡಿಇ , ಡಾ. ಚೌದರಿ ಆಸ್ಪತ್ರೆಗಳು ಸೇರಿದಂತೆ 8 ಖಾಸಗಿ ಆಸ್ಪತ್ರೆಗಳನ್ನು ಕೋವಿಡ್-19 ಆಸ್ಪತ್ರೆಗಳೆಂದು ನಿಗದಿಪಡಿಸಲಾಗಿದೆ. ಚಿಕಿತ್ಸೆಗೆ ಸಂಬಂಧಿಸಿದಂತೆ ಪೂರ್ಣ ಪ್ರಮಾಣದಲ್ಲಿ ಚಿಕಿತ್ಸೆ ಒದಗಿಸಬೇಕು. ಖಾಸಗಿ ಆಸ್ಪತ್ರೆಗಳಲ್ಲಿ 144 ಬೆಡ್‌ಗಳು ಸಿದ್ಧವಾಗಿದ್ದು, ಬರುವ ಮಂಗಳವಾರದವರೆಗೆ 170 ಬೆಡ್ ಸಿದ್ಧವಾಗಲಿದೆ ಎಂದರು.
ಸಾರ್ವಜನಿಕರು ಕೊರೊನಾ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಆಸ್ಪತ್ರೆಗಳಿಗೆ ಸಂಪರ್ಕಿಸಬೇಕು. ತಡವಾಗಿ ರೋಗಿಗಳು ಆಸ್ಪತ್ರೆಗೆ ದಾಖಲಾಗುತ್ತಿದ್ದು, ಉಳಿಸಿಕೊಳ್ಳುವುದು ಕಷ್ಟವಾಗುತ್ತದೆ. ಸಾರ್ವಜನಿಕರು ಕಾಲ ಹರಣ ಮಾಡದೆ ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ದಾಖಲಾಗುವಂತೆ ಮನವಿ ಮಾಡಿದರು.
90 ವರ್ಷ ಮೀರಿದ ವಯೋವೃದ್ಧರು ಕೊರೊನಾದಿಂದ ಗುಣಮುಖರಾಗಲು ಜಿಲ್ಲಾಸ್ಪತ್ರೆ ವೈದ್ಯರು ಶ್ರಮಿಸಿದ್ದಾರೆ. ಪಿ. 16965 ( 95 ವರ್ಷದ ವೃದ್ಧ) ಹಾಗೂ ರೋಗಿ ಸಂಖ್ಯೆ 13457 (90 ವರ್ಷದ ವೃದ್ಧೆ) ಜುಲೈ 5ರಂದು ಗುಣಮುಖರಾಗಿ ಜಿಲ್ಲಾಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಸಾರ್ವಜನಿಕರು ಸಕಾಲಕ್ಕೆ ಚಿಕಿತ್ಸೆ ಪಡೆದು ಅಪಾಯದಿಂದ ಪಾರಾಗುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಮನವಿ ಮಾಡಿದರು.