ವಿಜಯಪುರ: ಮಹಾಮಾರಿ ಕೊರೊನಾದಿಂದ ನಲುಗಿ ಹೋಗಿದ್ದ ಜಿಲ್ಲೆ ಸದ್ಯ ಅನ್ಲಾಕ್ ಬಳಿಕ ಸಹಜ ಸ್ಥಿತಿಗೆ ಮರಳುತ್ತಿದೆ. ಇದರಿಂದ ಜಿಲ್ಲೆಯ ಬಬಲೇಶ್ವರ ತಾಲೂಕಿನ ಹೊಳೆ ಬಬಲಾದಿ ಸದಾಶಿವ ಮುತ್ಯಾರ ಮಠಕ್ಕೆ ಭಕ್ತಸಾಗರ ಹರಿದು ಬರುತ್ತಿದ್ದು, ಅಂಬಲಿ ನೈವೇದ್ಯ ಅರ್ಪಿಸಿ ಭಕ್ತರು ಕೃತಾರ್ಥರಾಗುತ್ತಿದ್ದಾರೆ.
ಸಂಪೂರ್ಣವಾಗಿ ಕೊರೊನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಮಠಕ್ಕೆ ಹೆಚ್ಚು ಜನ ಬರಬಾರದು ಎಂದು ಸಿದ್ದು ಮುತ್ಯಾ ಶ್ರೀಗಳು ಮನವಿ ಮಾಡಿದ್ದಾರೆ. ಆದರೂ ಸಹ ಭಕ್ತರು ಕುಟುಂಬ ಸಮೇತ ದೇಗುಲಕ್ಕೆ ಆಗಮಿಸುತ್ತಿದ್ದಾರೆ. ಈ ಹಿಂದೆ ಐದು ಸೋಮವಾರಗಳ ಕಾಲ ಮನೆಯಲ್ಲಿ ಅಂಬಲಿ ನೈವೇದ್ಯ ಮಾಡಿದರೆ ಕೊರೊನಾ ತೊಲಗುತ್ತದೆ ಎಂದು ಶ್ರೀಗಳು ಭವಿಷ್ಯ ನುಡಿದಿದ್ದರು. ಅದಕ್ಕಾಗಿ ಕೊನೆಯ ಸೋಮವಾರವಾದ ಇಂದು ಮಠಕ್ಕೆ ಆಗಮಿಸಿದ ಭಕ್ತರು ಅಂಬಲಿ ನೈವೇದ್ಯ ಅರ್ಪಣೆ ಮಾಡಿದರು.
ದೇವಸ್ಥಾನಕ್ಕೆ 10 ಸಾವಿರಕ್ಕೂ ಅಧಿಕ ಭಕ್ತಾದಿಗಳು ಆಗಮಿಸಿದ ಕಾರಣ ನೂಕುನುಗ್ಗಲು ಉಂಟಾಯಿತು. ದೇವರ ದರ್ಶನಕ್ಕೆ ಭಕ್ತರು ಮುಗಿಬಿದ್ದಿದ್ದರು. ನಿನ್ನೆ ಭಾನುವಾರ ರಾತ್ರಿಯಿಂದ ಸೋಮವಾರ ರಾತ್ರಿವರೆಗೆ ಅಂದಾಜು 40 ಸಾವಿರ ಜನರು ಮುತ್ಯಾನ ದರ್ಶನ ಪಡೆದಿದ್ದಾರೆ. ಸಾಮಾಜಿಕ ಅಂತರ, ಮಾಸ್ಕ್ ಧಾರಣೆ ಸಂಪೂರ್ಣ ಮಾಯವಾಗಿತ್ತು. ಶ್ರೀಗಳು ಎಷ್ಟೇ ಮನವಿ ಮಾಡದಿರೂ ಭಕ್ತರು ಕೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ.
ಕಳೆದ ಶಿವರಾತ್ರಿ ದಿನ ಮಠದಲ್ಲಿ ನಡೆದ ಜಾತ್ರೆಯಲ್ಲಿ ಕೊರೊನಾ ಎರಡನೇ ಅಲೆ ಬಗ್ಗೆ ಬಬಲಾದಿ ಮಠದಿಂದ ಭವಿಷ್ಯವಾಣಿ ನುಡಿಯಲಾಗಿತ್ತು. ಅವರ ನುಡಿದಂತೆ ಕೊರೊನಾ ತಾಂಡವಾಡಿ ಶಾಂತವಾಗಿತ್ತು. ಇದರಿಂದ ಮಠದ ಮೇಲಿನ ಭಕ್ತಿ ಹೆಚ್ಚಾಗಿದೆ. ಹೀಗಾಗಿ ಇಲ್ಲಿನ ಭವಿಷ್ಯವಾಣಿಯನ್ನು ಸಾವಿರಾರು ಜನ ಪಾಲಿಸುತ್ತಾರೆ. ಬಬಲಾದಿ ಮಠದ ಪವಾಡಗಳಿಂದಾಗಿ ಇದನ್ನು 'ಬೆಂಕಿ ಬಬಲಾದಿ' ಎಂದು ಭಕ್ತರು ಕರೆಯುತ್ತಾರೆ.