ವಿಜಯಪುರ: ನಾನು ಜೆಡಿಎಸ್ ಬಿಡುವ ಪ್ರಶ್ನೆಯಿಲ್ಲ. ಕ್ಷೇತ್ರದ ಅಭಿವೃದ್ಧಿ ಹಾಗೂ ಮತದಾರರ ಒತ್ತಡವಿದ್ದರೆ ವಿಚಾರ ಮಾಡೋಣ ಎಂದು ಹೇಳುವುದರ ಮೂಲಕ ಪರೋಕ್ಷವಾಗಿ ಬಿಜೆಪಿಯತ್ತ ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ ಒಲವು ತೋರಿಸಿದ್ದಾರೆ.
ಮಾಧ್ಯಮಗೋಷ್ಠಿ ನಡೆಸಿ ಮಾತಾಡಿದ ಅವರು, ನಾನು ಬೇರೆ ಪಕ್ಷಕ್ಕೆ ಹೋಗುವುದಾದರೆ ಕದ್ದು ಮುಚ್ಚಿ ಹೊಗೋದಿಲ್ಲ. ಒಂದು ವೇಳೆ ಹೋಗುವುದಾದ್ರೆ ಮಾಧ್ಯಮ ದವರಿಗೆ ಹಾಗೂ ಕ್ಷೇತ್ರದ ಜನತೆಗೆ ತಿಳಿಸಿ, ಡಂಗೂರ ಸಾರಿಯೇ ಹೋಗುತ್ತೇನೆ ಎಂದರು.
ರಾಜಕಾರಣದಲ್ಲಿ ಯಾರು ಶತ್ರುಗಳಲ್ಲ ಯಾರೂ ಮಿತ್ರರಲ್ಲ. ಸದ್ಯದ ಮಟ್ಟಿಗೆ ನಾನು ಜೆಡಿಎಸ್ ನಾಯಕರ ಸೂಚನೆಗೆ ಬದ್ದನಾಗಿರುವೆ. ಹಿಂದೆ ನಾನು ಕ್ಷೇತ್ರದ ಅಭಿವೃದ್ಧಿ ಕುರಿತು ಸಿಎಂ ಯಡಿಯೂರಪ್ಪ ಜೊತೆ ಚರ್ಚೆ ಮಾಡಿದ್ದೇನೆ ಅಷ್ಟೇ. ಎಲ್ಲ ಪಕ್ಷದ ಶಾಸಕರಿಗೂ, ಜನರಿಗೂ ಸಿಎಂ ಒಬ್ಬರೇ ಆಗಿರುತ್ತಾರೆ ಈ ಹಿನ್ನೆಲೆ ಯತ್ನಾಳ ಅವರ ಜೊತೆ ಆಶ್ರಯ ಯೋಜನೆ ಮನೆ ಕುರಿತು ಚರ್ಚೆ ನಡೆಸಲಾಗಿದೆ ಎಂದು ಹೇಳಿದರು.
ನಾನು ಕ್ಷೇತ್ರದ ಜನತೆ ಬಿಟ್ಟು ಏನು ಮಾಡುವುದಿಲ್ಲ. ನೂರಾರು ಕೋಟಿ ಹಣ ನನ್ನ ಕ್ಷೇತ್ರದ ಅಭಿವೃದ್ಧಿಗೆ ಕೊಟ್ಟರೆ ಮುಂದೆ ನೋಡೋಣ ಎಂದು ಪರೋಕ್ಷವಾಗಿ ಬಿಜೆಪಿಯತ್ತ ಒಲವಿನ ಮಾತನಾಡಿದರು.