ವಿಜಯಪುರ : ಮಾಜಿ ಸಚಿವ ಎಂ ಸಿ ಮನಗೂಳಿ ನಿಧನದಿಂದ ತೆರವಾಗಿದ್ದ ಸಿಂದಗಿ ವಿಧಾನಸಭೆ ಉಪಚುನಾವಣೆಗೆ ಕೊನೆಗೂ ಮೂಹರ್ತ ಫಿಕ್ಸ್ ಆಗುತ್ತಿದ್ದಂತೆ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿವೆ.
ಜೆಡಿಎಸ್ ನಿಂದ ಪಕ್ಷಾಂತರ ಮಾಡಿ ಕಾಂಗ್ರೆಸ್ ಸೇರಿರುವ ದಿ. ಎಂ ಸಿ ಮನಗೂಳಿ ಪುತ್ರ ಅಶೋಕ ಮನಗೂಳಿ ಬಹುತೇಕ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ. ತಂದೆ ನಿಧನ ನಂತರ ಅಶೋಕ ಮನಗೂಳಿಯನ್ನು ಕಾಂಗ್ರೆಸ್ ನವರು ತಮ್ಮತ್ತ ಸೆಳೆದಿದ್ದರು. ಇದಕ್ಕೆ ಮುಖ್ಯವಾಗಿ ಅನುಕಂಪ ಗಿಟ್ಟಿಸುವ ಲೆಕ್ಕಾಚಾರ ಇತ್ತು.
ಆಗಿನಿಂದಲೇ ಅಶೋಕ ಮನಗೂಳಿ ಬೃಹತ್ ಸಮಾವೇಶ ನಡೆಸಿ ಅಧಿಕೃತವಾಗಿ ಕಾಂಗ್ರೆಸ್ ಗೆ ಸೇರಲು ಸಿದ್ಧತೆ ಮಾಡಿ ಕೊಂಡಿದ್ದರು. ಆದರೆ, ಮೂರು ಕ್ಷೇತ್ರದ ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆ ಸಮಾವೇಶ ನೀತಿ ಸಂಹಿತೆ ವ್ಯಾಪ್ತಿಗೆ ಬರುವ ಕಾರಣ ರದ್ದುಗೊಳಿಸಿದ್ದರು. ಅಂದಿನಿಂದಲೇ ಚುನಾವಣೆ ತಯಾರಿಯನ್ನು ಅಶೋಕ್ ಮನಗೂಳಿ ನಡೆಸುತ್ತಿದ್ದರು.
ಇತ್ತ ಕಳೆದ ಚುನಾವಣೆಯಲ್ಲಿ ದಿ. ಎಂ ಸಿ ಮನಗೂಳಿ ವಿರುದ್ಧ ಸೋತಿದ್ದ ಬಿಜೆಪಿಯ ರಮೇಶ ಭೂಸನೂರ ಈ ಬಾರಿಯೂ ಆಡಳಿತಾರೂಢ ಬಿಜೆಪಿಯಿಂದ ಸ್ಪರ್ಧಿಸುವುದು ಖಚಿತವಾಗಿದೆ. ಸರ್ಕಾರ ಬಿಜೆಪಿಯದ್ದೇ ಆಗಿರುವ ಕಾರಣ ಗೆಲುವಿನ ಲೆಕ್ಕಾಚಾರ ರಮೇಶ ಭೂಸನೂರದ್ದಾಗಿದೆ.
ಜೆಡಿಎಸ್ ಪಕ್ಷ ತೊರೆದಿರುವ ಅಶೋಕ ಮನಗೂಳಿಗೆ ಪರ್ಯಾಯವಾಗಿ ಜೆಡಿಎಸ್ ನಿಂದ ಮಾಜಿ ಶಾಸಕ ರವಿಕಾಂತ ಪಾಟೀಲ ಕಣಕ್ಕಿಳಿಯಲಿದ್ದಾರೆ. ಈ ಹಿಂದೆ ಬಿಜೆಪಿಯಿಂದ ಇಂಡಿ ಮತಕ್ಷೇತ್ರದಿಂದ ಮೂರು ಬಾರಿ ಗೆಲುವು ಸಾಧಿಸಿದ್ದು ಅವರಿಗೆ ಪ್ಲಸ್ ಪಾಯಿಂಟ್ ಎನ್ನಬಹುದು.
ಇದರ ಜತೆ ದಿ. ಎಂ.ಸಿ. ಮನಗೂಳಿ ಅವರ ಕೊನೆಯ ಪುತ್ರ ಮುತ್ತು ಮನಗೂಳಿ ಸ್ಪರ್ಧಿಯಾಗಿದ್ದಾರೆ. ಆದರೆ, ಅವರು ತಾನು ಕೂಡ ಸಹೋದರನ ಜತೆ ಜೆಡಿಎಸ್ ತೊರೆದಿದ್ದೇನೆ ಎಂದಿದ್ದರು. ಆದರೆ, ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಏನಾದರೂ ಆಗಬಹುದು ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರವಾಗಿದೆ.
2018 ವಿಧಾನಸಭೆ ಚುನವಣೆ ಮತ ಲೆಕ್ಕಾಚಾರ:
- ಎಂ.ಸಿ. ಮನಗೂಳಿ(ಜೆಡಿಎಸ್) 70,865 ಶೇ 44ರಷ್ಟು ಮತ, ಗೆಲುವು
- ರಮೇಶ ಭೂಸನೂರ. (ಬಿಜೆಪಿ) 61,560 ಶೇ. 38.00
- ಮಲ್ಲನ್ನ ನಾಗಪ್ಪ ಸಾಲಿ (ಕಾಂಗ್ರೆಸ್)22,818 ಶೇ.14.00