ಮುದ್ದೇಬಿಹಾಳ: ಲೋಕೋಪಯೋಗಿ ಇಲಾಖೆಯಡಿ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಅಗಸಬಾಳ ಕ್ರಾಸ್‌ವರೆಗೆ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ, ಡಾ. ಬಿ.ಆರ್.ಅಂಬೇಡ್ಕರ್ ಭವನ ಉದ್ಘಾಟನೆ ಹಾಗೂ ಹುನಗುಂದ-ತಾಳಿಕೋಟಿ ರಸ್ತೆ ಲೋಕಾರ್ಪಣಾ ಸಮಾರಂಭ ಇದೇ ತಿಂಗಳ 22ರಂದು ಹಮ್ಮಿಕೊಳ್ಳಲಾಗಿದ್ದು, ಸಮಾರಂಭದ ಉದ್ಘಾಟನೆಗೆ ಉಪಮುಖ್ಯಮಂತ್ರಿ, ಲೋಕೋಪಯೋಗಿ ಇಲಾಖೆ ಸಚಿವ ಗೋವಿಂದ ಕಾರಜೋಳ ಆಗಮಿಸುವರು ಎಂದು ಬಿಜೆಪಿ ಮುಖಂಡ ಶಾಂತಗೌಡ ಪಾಟೀಲ ನಡಹಳ್ಳಿ ಹೇಳಿದರು.
ಪಟ್ಟಣದ ಎಂಜಿವಿಸಿ ಕಾಲೇಜಿನ ಎದುರಿಗೆ ನ. 22ರಂದು ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ, ಉದ್ಘಾಟನಾ ಸಮಾರಂಭಕ್ಕೆ ಡಿಸಿಎಂ ಹಾಗೂ ಸಂಸದರು, ಸಚಿವರು, ಶಾಸಕರು ಆಗಮಿಸುವುದಾಗಿ ನಡಹಳ್ಳಿ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಆಹಾರ ನಿಗಮದ ಅಧ್ಯಕ್ಷರು, ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರ ವಿಶೇಷ ಪ್ರಯತ್ನದ ಮೇರೆಗೆ ಪಟ್ಟಣದ ವ್ಯಾಪ್ತಿಯಲ್ಲಿ ಸಿಸಿ ರಸ್ತೆಗಳು ಹಾಗೂ ಪಿಡಬ್ಲ್ಯೂಡಿ ಇಲಾಖೆಯಿಂದ ನಿರ್ಮಿಸಲಾಗುತ್ತಿರುವ ದ್ವಿಪಥ ರಸ್ತೆ ನಿರ್ಮಾಣದ ಕಾಮಗಾರಿಗೆ ಡಿಸಿಎಂ ಚಾಲನೆ ನೀಡಲಿದ್ದಾರೆ. ಕೋವಿಡ್-19 ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಇಲ್ಲಿನ ಎಂಜಿವಿಸಿ ಕಾಲೇಜಿನ ಎದುರಿಗೆ ಇರುವ ಖಾಲಿ ಜಾಗಯಲ್ಲಿ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ತಿಳಿಸಿದರು.