ವಿಜಯಪುರ: ಕೋವಿಡ್ -19 ಪಿಡುಗು ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಹೋಮ್ ಕ್ವಾರಂಟೈನ್ ನಿರ್ದೇಶನ ಪಾಲಿಸದವರ ಹಾಗೂ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ ಎಚ್ಚರಿಕೆ ನೀಡಿದ್ದಾರೆ.
ಪ್ರವಾಸಿ ಮಂದಿರದಲ್ಲಿ ಕೋವಿಡ್-19 ಮುನ್ನೆಚ್ಚರಿಕೆ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಸರ್ಕಾರದ ನಿರ್ದೇಶನದಂತೆ ಹೋಮ್ ಕ್ವಾರಂಟೈನ್ ನಲ್ಲಿರುವವರ ಎಡ ಕೈಗೆ ಸೀಲ್ ಹಾಕಲು ನಿರ್ಧರಿಸಿದ್ದು, ಹೋಮ್ ಕ್ವಾರಂಟೈನ್ ನಿರ್ದೇಶನ ಪಾಲಿಸದವರ ಹಾಗೂ ನಿರ್ಲಕ್ಷ ತೋರುವ ಸಿಬ್ಬಂದಿ ವಿರುದ್ದವು ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪಕ್ಕದ ಕೆಲವು ಜಿಲ್ಲೆಗಳಲ್ಲಿ ಕೋವಿಡ್ ಸೋಂಕಿತ ಪ್ರಕರಣಗಳು ಕಂಡು ಬಂದ ಹಿನ್ನಲೆ ಅತಿ ಹೆಚ್ಚಿನ ನಿಗಾ ವಹಿಸುವ ಅಗತ್ಯವಿದ್ದು, ನಾಳೆ ಬೆಳಗ್ಗೆಯಿಂದ ಮಹಾರಾಷ್ಟ್ರ ಮತ್ತು ಕಲಬುರ್ಗಿಯಿಂದ ಆಗಮಿಸುವ ಎಲ್ಲ ವಾಹನಗಳನ್ನು ಚೆಕ್ ಪೋಸ್ಟ್ ಗಳ ಮೂಲಕ ನಿರ್ಬಂಧಿಸಲು ತೀರ್ಮಾನಿಸಲಾಗಿದೆ. ಅಗತ್ಯ ವಸ್ತುಗಳು, ಮೆಡಿಕಲ್ ಆ್ಯಂಬುಲೆನ್ಸ್, ಮತ್ತು ಆಯಾ ತಹಶೀಲ್ದಾರಗಳಿಂದ ಅನುಮತಿ ಹೊಂದಿರುವ ವಾಹನಗಳನ್ನು ಹೊರತುಪಡಿಸಿ ಉಳಿದ ವಾಹನಗಳನ್ನು ನಿರ್ಬಂಧಿಸಲಾಗಿದೆ ಎಂದರು. ಜೊತೆಗೆ ಬೆಳಗಾವಿ, ಬಾಗಲಕೋಟೆ, ಯಾದಗಿರಿ, ರಾಯಚೂರು ಜಿಲ್ಲೆಗಳ ಗಡಿಗಳಲ್ಲಿಯು ಇದೇ ನಿಯಮ ಪಾಲಿಸಲಾಗುವುದು ಎಂದು ತಿಳಿಸಿದರು.
ಚೆಕ್ ಪೋಸ್ಟ್ ಸಿಬ್ಬಂದಿಗೆ ಮಾಸ್ಕ್, ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ಮತ್ತು ಇತರೆ ಪರಿಕರಗಳನ್ನು ತಪ್ಪದೆ ಪುರೈಸಲು ಸಭೆಯಲ್ಲಿ ಸೂಚನೆ ನೀಡಿದ್ದಾರೆ.