ವಿಜಯಪುರ: ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿರುವ ಹಿನ್ನೆಲೆ ಜಿಲ್ಲೆಯ ಎಲ್ಲ ಆಸ್ಪತ್ರೆಗಳನ್ನು ತೆರೆದಿಡುವಂತೆ ಸೂಚಿಸಿರುವ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್, ಇದಕ್ಕೆ ತಪ್ಪಿದಲ್ಲಿ ಆಯಾ ಆಸ್ಪತ್ರೆಗಳ ನೋಂದಣಿ ರದ್ದುಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಖಾಸಗಿ ಆಸ್ಪತ್ರೆಗಳ ವೈದ್ಯರೊಂದಿಗೆ ಸಭೆ ನಡೆಸಿದ ಅವರು, ಜಿಲ್ಲೆಯಾದ್ಯಂತ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಆಸ್ಪತ್ರೆಗಳನ್ನು ಹೊರತುಪಡಿಸಿ ಇನ್ನು ಕೆಲವು ಆಸ್ಪತ್ರೆಗಳು ತೆರೆಯದಿರುವ ಬಗ್ಗೆ ಗಮನಕ್ಕೆ ಬಂದಿದೆ. ಅಂತಹ ಆಸ್ಪತ್ರೆಗಳು ತಕ್ಷಣ ತೆರೆದು ಸಾರ್ವಜನಿಕರ ಸೇವೆಗೆ ಅಣಿಯಾಗಬೇಕು. ಈ ಕುರಿತಂತೆ ಯಾವುದೇ ರೀತಿಯ ದೂರು ಬಂದಲ್ಲಿ ಅಂತಹ ಆಸ್ಪತ್ರೆಗಳ ನೋಂದಣಿಯನ್ನು ತಕ್ಷಣ ರದ್ದುಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಜಿಲ್ಲೆಯಾದ್ಯಂತ ಇರುವಂತಹ 229 ಆರ್ಯುವೇದಿಕ್ ಕ್ಲೀನಿಕ್/ ನರ್ಸಿಂಗ್, 5 ಯುನಾನಿ, 29 ಹೋಮಿಯೋಪಥಿಕ್, 230 ಆಲೋಪಥಿಕ್ ಮತ್ತು 38 ಡೈಗ್ನೋಸ್ಟಿಕ್ ಆಸ್ಪತ್ರೆಗಳು ಯಾವುದೇ ಪರಿಸ್ಥಿತಿಯಲ್ಲಿ ಉಸಿರಾಟ ತೊಂದರೆ, ನೆಗಡಿ, ಕೆಮ್ಮು, ಜ್ವರ (ಐಎಲ್‍ಐ) ರೋಗಿಗಳನ್ನು ಉಪಚರಿಸುವಂತಿಲ್ಲ. ಇಂತಹ ರೋಗಿಗಳು ಕಂಡುಬಂದಲ್ಲಿ ತಕ್ಷಣ ತಜ್ಞವೈದ್ಯರ ಬಳಿಗೆ ಕಳುಹಿಸುವುದರ ಜೊತೆಗೆ ರೋಗಿ, ಸಂಬಂಧಿಸಿದ ಆಸ್ಪತ್ರೆಗೆ ತಲುಪಿದ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಈ ಕುರಿತು ಆಯಾ ತಾಲೂಕು ಆರೋಗ್ಯಾಧಿಕಾರಿಗಳು ಮತ್ತು ಐಎಂಎ ಅಧ್ಯಕ್ಷರಿಗೂ ಮಾಹಿತಿ ಒದಗಿಸಬೇಕು. ಅಲ್ಲದೇ ರೋಗಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಟ್ಟುಕೊಂಡಿರಬೇಕು ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈಗಾಗಲೇ ಘೋಷಿಸಿರುವ ಕಂಟೇನ್ಮೆಂಟ್ ವಲಯದಲ್ಲಿ ಯಾವುದೇ ಆಸ್ಪತ್ರೆಗಳು ಒಐಪಿಡಿ, ಡೆಲೆವರಿ, ಸರ್ಜರಿಗಳನ್ನು ಕೈಗೊಳ್ಳುವಂತಿಲ್ಲ. ಕೇವಲ ಒಪಿಡಿಗಳನ್ನು ಮಾತ್ರ ತೆರೆದು ಚಿಕಿತ್ಸೆ ನೀಡಬಹುದಾಗಿದ್ದು, ಆರೋಗ್ಯಕ್ಕೆ ಸಂಬಂಧಿಸಿದ ತುರ್ತು ಚಿಕಿತ್ಸಾ ಪ್ರಕರಣಗಳು ಬಂದಲ್ಲಿ ಅಂತಹ ರೋಗಿಗಳನ್ನು ಇತರೆ ತಜ್ಞ ವೈದ್ಯರ ಬಳಿ ಕಳುಹಿಸಲು ಪೊಲೀಸ್ ಇಲಾಖೆಯ ನೆರವನ್ನು ಪಡೆಯಬಹುದಾಗಿದೆ ಎಂದರು.
ಅದರಂತೆ ಈ ಆಸ್ಪತ್ರೆಗಳಲ್ಲಿ ಶೇ. 25 ರಷ್ಟು ಸಿಬ್ಬಂದಿಯನ್ನು ಇಟ್ಟುಕೊಂಡು ಅವರನ್ನು ಕಂಟೇನ್ಮೆಂಟ್ ವಲಯದಿಂದ ಸಂಚರಿಸಲು ಅವಕಾಶ ನೀಡದೆ, ಸೂಕ್ತ ಸುರಕ್ಷತಾ ಪರಿಕರಗಳೊಂದಿಗೆ ಆರೋಗ್ಯ ಸೇವೆ ಕಲ್ಪಿಸುವಂತೆ ತಿಳಿಸಿದ ಅವರು, ಬಫರ್ಝೋನ್ ಆಸ್ಪತ್ರೆಗಳು ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿಯ ಮಾರ್ಗ ಸೂಚಿಯನ್ವಯ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಿದ್ದಾರೆ.
ಕೋವಿಡ್-19 ಸಂದಿಗ್ದ ಪರಿಸ್ಥಿತಿಯಲ್ಲಿ ಸಾರ್ವಜನಿಕರಿಗೆ ಆರೋಗ್ಯ ಸೇವೆ ಕಲ್ಪಿಸಿ ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ತಿಳಿಸಿರುವ ಅವರು ಬಯೋಮೆಡಿಕಲ್ ವೇಸ್ಟ್ ನಿರ್ವಹಣೆಗೆ ಸಮನ್ವಯ ಸಾಧಿಸಲಾಗುವುದು. ಕೋವಿಡ್-19 ಹೊರತುಪಡಿಸಿ ಇತರೇ ಯಾವುದಾದರು ಸಾವು ಆಗಿದ್ದಲ್ಲಿ ದೃಢೀಕರಣ ಪ್ರಮಾಣಪತ್ರ ಇಟ್ಟುಕೊಳ್ಳುವುದರ ಜೊತೆಗೆ ಸಂಬಂಧಪಟ್ಟವರಿಗೂ ನೀಡಬೇಕು ಎಂದರು.