ವಿಜಯಪುರ: ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ನಗರದ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ತಳಮಟ್ಟದ ಪ್ರದೇಶದಲ್ಲಿ ನೀರು ನಿಂತು ಸಂಚಾರ ಸಹ ಹಾಳಾಗಿ ಹೋಗಿದೆ. ವಾರ್ಡ್ಗಳ ಸದಸ್ಯರ ಅವಧಿ ಮುಗಿದ ಕಾರಣ ಜನ ತಮ್ಮ ನೋವನ್ನು ಯಾರ ಮುಂದೆ ತೋಡಿಕೊಳ್ಳಬೇಕು ಎಂದು ತಿಳಿಯಲಾಗದೆ ರೋಸಿ ಹೋಗಿದ್ದಾರೆ. ಪಾಲಿಕೆ ವಿರುದ್ಧ ರಸ್ತೆ ಸುಧಾರಿಸಲು ಒತ್ತಾಯಿಸಿ ಈಗ ಬೀದಿಗಿಳಿಯುತ್ತಿದ್ದಾರೆ.
ವಿಜಯಪುರ ನಗರ ಬೆಳವಣಿಗೆ ಹಂತದಲ್ಲಿದೆ. ನಗರಸಭೆಯಾಗಿದ್ದ ಇದನ್ನು ಸರ್ಕಾರ ಜನಸಂಖ್ಯೆ ಹಾಗೂ ಪ್ರವಾಸೋದ್ಯಮ ಅನುಕೂಲಕ್ಕಾಗಿ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿಸಿದೆ. ನಗರದ ಜನಸಂಖ್ಯೆ 3.27 ಲಕ್ಷವಿದ್ದು, ಇದಕ್ಕೆ ಅನುಗುಣವಾಗಿ 35 ವಾರ್ಡ್ಗಳಾಗಿ ವಿಂಗಡಿಸಲಾಗಿದೆ.
ಪ್ರವಾಸೋದ್ಯಮ ಬೆಳೆವಣಿಗೆಗೆ ಪೂರಕವಾಗಬೇಕಾಗಿದ್ದ ಮಹಾನಗರ ಪಾಲಿಕೆಯ ಕಾರ್ಯವೈಖರಿಯಿಂದ ಇಂದು ರಸ್ತೆಗಳು ಗುಂಡಿಗಳಾಗಿಬಿಟ್ಟಿವೆ. ಸ್ವಲ್ಪ ಮಳೆಯಾದರೆ ಸಾಕು ರಸ್ತೆ ತುಂಬೆಲ್ಲಾ ನೀರು ನಿಲ್ಲುತ್ತಿದೆ. ರಸ್ತೆ ಬದಿಯ ಅಂಗಡಿಗಳಿಗೂ ನೀರು ನುಗ್ಗುತ್ತಿದೆ. ರಸ್ತೆ ಯಾವುದು, ಗುಂಡಿ ಯಾವುದು ಎನ್ನುವುದೇ ತಿಳಿಯುವುದಿಲ್ಲ.
ನಗರದ ಟಿಪ್ಪು ಸುಲ್ತಾನ್ ರಸ್ತೆಯಿಂದ ಗಾಂಧಿ ಚೌಕ್ಗೆ ಹೋಗುವ ಕಿರಿದಾದ ರಸ್ತೆಯಲ್ಲಿ ಮಳೆ ಬಂದರೆ ವಾಹನ ಹೋಗಲು ಸಹ ಸಾಧ್ಯವಾಗುವುದಿಲ್ಲ. ಸರ್ಕಾರಿ ಕಾಲೇಜು ಬಳಿ ನಿರ್ಮಿಸಿರುವ ಅಂಗಡಿಗಳು ಮಳೆ ಬಂದರೆ ವ್ಯಾಪಾರ ಸ್ಥಗಿತಗೊಳಿಸಬೇಕಾಗುತ್ತದೆ. ಇಲ್ಲಿನ ವ್ಯಾಪಾರಿಗಳು ರಸ್ತೆ ಸುಧಾರಿಸಿ ಎಂದು ಕಳೆದ ಒಂದು ದಶಕದಿಂದ ಬೇಡಿಕೆ ಇಟ್ಟರೂ ಪಾಲಿಕೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲವಂತೆ.
ವಿಜಯಪುರ ನಗರಕ್ಕೆ ಎಂಟ್ರಿ ಕೊಡುವ ರಸ್ತೆಯೇ ಸಂಪೂರ್ಣ ಹಾಳಾಗಿದೆ. ರಸ್ತೆಯಲ್ಲಿ ನೀರು ನಿಂತು ಸಾರ್ವಜನಿಕರು ನಡೆದಾಡಲು ಪರದಾಡಬೇಕಾಗಿದೆ. ಇದೇ ರಸ್ತೆಯಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣವಾಗುತ್ತಿರುವ ಕಾರಣ ಸಂಚಾರ ಮಾಡುವವರ ಪರಿಸ್ಥಿತಿ ಹೇಳತೀರದಾಗಿದೆ.
ಇದರ ಜತೆ ಮನಗೂಳಿ ಅಗಸಿ, ಬಸ್ ನಿಲ್ದಾಣ ಹಿಂಬದಿ ರಸ್ತೆ, ಮೀನಾಕ್ಷಿ ಚೌಕ್, ಎಸ್.ಎಸ್. ರಸ್ತೆ, ಗಣಪತಿ ಚೌಕ್, ಆದರ್ಶನಗರ, ಬಂಜಾರ ಕಾಲೋನಿ, ಸಿದ್ದೇಶ್ವರ ರಸ್ತೆ ಸೇರಿದಂತೆ ಹೊರವಲಯದ ರಸ್ತೆಗಳು ಸಹ ಸಂಪೂರ್ಣ ಹಾಳಾಗಿದ್ದು, ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣವಾಗಿರುವ ಕಾರಣ ಮಳೆಯಲ್ಲಿ ರಸ್ತೆಗಳು ಗುಂಡಿಗಳಾಗಿ ಪರಿವರ್ತನೆಯಾಗುತ್ತದೆ. ಇದರಿಂದ ಜನ ಬೇಸತ್ತು ಹೋಗಿದ್ದಾರೆ.
ನಗರದ ರಸ್ತೆಗಳಲ್ಲಿ ಮಳೆ ನೀರು ನಿಲ್ಲಬಾರದು ಎಂದು ಅಲ್ಲಲ್ಲಿ ನೀರು ಸರಾಗವಾಗಿ ಹೋಗಲು ವ್ಯವಸ್ಥೆ ಮಾಡಲಾಗಿದೆ. ಇದರ ಜತೆ ಭಾರೀ ವಾಹನಗಳಿಗೆ ಕೂಡ ಬೈಪಾಸ್ ರಸ್ತೆ ಮೂಲಕ ಸಂಚರಿಸಲು ಅನುವು ಮಾಡಿಕೊಡಲಾಗಿದೆ. ಅಷ್ಟಾದರೂ ಮಳೆಗೆ ರಸ್ತೆಗಳೇ ಕೊಚ್ಚಿ ಹೋಗುತ್ತಿವೆ.
ವಾರ್ಡ್ ವಿಂಗಡಣೆಗಾಗಿ ಮಹಾನಗರ ಪಾಲಿಕೆ ಚುನಾವಣೆ ಕಳೆದ ಒಂದು ವರ್ಷದಿಂದ ನಡೆಯುತ್ತಿಲ್ಲ. ನ್ಯಾಯಾಲಯ ಚುನಾವಣೆಗೆ ಅನುಮತಿ ನೀಡಿದರೆ ಮುಂದೆ ಬರುವ ಚುನಾಯಿತ ಸದಸ್ಯರು ನಗರ ಸುಧಾರಣೆಗೆ ಒತ್ತು ನೀಡಬಹುದು ಎಂದು ಜನ ಕಾದು ಕುಳಿತಿದ್ದಾರೆ.