ವಿಜಯಪುರ: ಕಾಂಗ್ರೆಸ್ ಮುಖಂಡರು ಸಮಾಜದಲ್ಲಿ ಜಾತಿ ವಿಷ ಬಿತ್ತುತ್ತಿದ್ದಾರೆ ಎಂಬ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ. ವಿವಿಧ ಸಮುದಾಯದ ಮುಖಂಡರು ಸಭೆಗೆ ಕರೆದಾಗ ಬರುವುದಿಲ್ಲ ಎನ್ನಲು ಆಗುತ್ತಾ? ಎಂದು ಪ್ರಶ್ನಿಸಿದ್ದಾರೆ.
ಸಿಂದಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಪರ ಮತಯಾಚನೆ ವೇಳೆ ಅವರು ಮಾತನಾಡಿದರು. ವಿವಿಧ ಸಮುದಾಯದವರು ಸಭೆಗಳಿಗೆ ಕರೆಯುತ್ತಾರೆ. ಹೀಗಾಗಿ, ಹೋಗುತ್ತಾರೆ ಅಷ್ಟೇ. ನಮ್ಮದು ಜಾತಿ ರಾಜಕಾರಣವಲ್ಲ, ನೀತಿ ರಾಜಕಾರಣ ಎಂದರು.
ಡಿ.ಕೆ ಶಿವಕುಮಾರ ಮೊಟೆಗಟ್ಟಲೇ ಹಣ ತಂದು ಹಂಚುತ್ತಿದ್ದಾರೆ ಎನ್ನುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸದ್ಯ ಸಿಂದಗಿಗೆ ಬಂದಿದ್ದೇನೆ. ಬರುವಾಗ ಚೆಕ್ ಪೋಸ್ಟ್ನಲ್ಲಿ ನನ್ನ ವಾಹನವನ್ನು ಪೊಲೀಸರು ತಡೆದು ತಪಾಸಣೆ ಮಾಡಿದ್ದಾರೆ. ಅಲ್ಲಿ ಏನು ಹಣ ಸಿಕ್ಕಿದೆಯಾ? ಎಂದು ಮರು ಪ್ರಶ್ನಿಸಿದರು.
ದೇಶದಲ್ಲಿ ಮೋದಿ ಸರ್ಕಾರ ಬಂದ ಮೇಲೆ ರೈತರ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಬೆಳೆಗಳಿಗೆ ಗೊಬ್ಬರ ಸಿಗುತ್ತಿಲ್ಲ. ಗೊಬ್ಬರವನ್ನು ಸಹ ಬ್ಲಾಕ್ ಮಾರ್ಕೆಟ್ ಮಾಡಲಾಗುತ್ತಿದೆ. ಹೀಗಾದರೆ ಹೇಗೆ? ಎಂದರು.
ಕಳೆದ ಲೋಕಸಭೆ ಚುನಾವಣೆ ವೇಳೆ ಪ್ರಧಾನಿ ಮೋದಿ ಮತದಾರರಿಗೆ ಮತ ಹಾಕುವ ಮುನ್ನ ಸಿಲಿಂಡರ್ಗಳಿಗೆ ಕೈ ಮುಗಿಯಿರಿ ಎಂದು ಲೇವಡಿ ಮಾಡಿದ್ದರು. ಈಗ ನಾನು ಅದನ್ನೇ ಹೇಳುತ್ತೇನೆ. ಮತ ಹಾಕುವ ಮುನ್ನ ಸಿಲಿಂಡರ್ ಜತೆ ಸ್ಕೂಟರ್, ಆಟೋ ರಿಕ್ಷಾಗಳಿಗೂ ಕೈ ಮುಗಿಯಿರಿ ಎನ್ನುವ ಮೂಲಕ ತೈಲ ಬೆಲೆ ಏರಿಕೆಗೆ ಕೇಂದ್ರದ ನೀತಿ ಕಾರಣ ಎಂದು ಪರೋಕ್ಷವಾಗಿ ತಿವಿದರು.
ಓದಿ: ನೌಕರರಿಗೆ ಕೋವಿಡ್ ಲಸಿಕೆ ಕಡ್ಡಾಯ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್