ವಿಜಯಪುರ: ಸೆಪ್ಟೆಂಬರ್ 14 ರಿಂದ ಎರಡು ದಿನಗಳ ಕಾಲ ರಾಜ್ಯ ಮೌಂಟೇನ್ ಬೈಕ್ ಚಾಂಪಿಯನ್ಶಿಪ್ ಸಂಘಟಿಸಲಾಗಿದೆ ಎಂದು ಸೈಕ್ಲಿಂಗ್ ಅಸೋಸಿಯೇಷನ್ ಅಧ್ಯಕ್ಷ ರಾಜು ಬಿರಾದಾರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಮೆಚ್ಯೂರ್ ಸೈಕ್ಲಿಂಗ್ ಅಸೋಸಿಯೇಶನ್, ಈ ಮೌಂಟೇನ್ ಬೈಕ್ ಚಾಂಪಿಯನ್ಶಿಪ್ನ ಆತಿಥ್ಯ ವಹಿಸಿಕೊಂಡಿದೆ. ಕಳೆದ 28 ರಿಂದ 30 ವರ್ಷಗಳಲ್ಲಿ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ವಿಜಯಪುರ ಜಿಲ್ಲೆಯ ಸುಮಾರು 300 ಕ್ಕಿಂತ ಹೆಚ್ಚು ಕ್ರೀಡಾಪಟುಗಳು ಉನ್ನತ ಸಾಧನೆ ತೋರಿ ಸೈಕ್ಲಿಂಗ್ ರಂಗ ಬೆಳೆಸಿದ್ದಾರೆ. ಅದೇ ರೀತಿ ಮೌಂಟೇನ್ ಬೈಕ್ ಚಾಂಪಿಯನ್ಶಿಪ್ನಲ್ಲಿ ಕಳೆದ ಮೂರು ವರ್ಷಗಳಿಂದಲೂ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ ಎಂದರು.
14,15,16 ಮತ್ತು 18 ವಯೋಮಾನದ ಬಾಲಕ-ಬಾಲಕಿಯರಿಗೆ ಹಾಗೂ ಪುರುಷ-ಮಹಿಳೆಯರಿಗೆ ಸ್ಪರ್ಧೆಗಳು ಜರುಗಲಿವೆ. ಈ ಚಾಂಪಿಯನ್ಶಿಪ್ನಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ರಾಷ್ಟ್ರ ಮತ್ತು ಅಂತಾರಾಷ್ಟ್ರ ಖ್ಯಾತಿಯ ಸುಮಾರು 200 ಪಟುಗಳು ಹಾಗೂ 50 ಜನ ಕ್ರೀಡಾಧಿಕಾರಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.