ವಿಜಯಪುರ: ನಡೆದಾಡುವ ದೇವರೆಂಬ ಖ್ಯಾತಿಯ ಸಿದ್ದೇಶ್ವರ ಶ್ರೀಗಳು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಐತಿಹಾಸಿಕ ನಗರಿಯ ಸಾಂಸ್ಕೃತಿಕ ಹಬ್ಬ ನವರಸಪುರ ಉತ್ಸವ ಆಚರಣೆ ಈ ಬಾರಿಯೂ ನಡೆಯುವುದು ಅನುಮಾನ. ಇದರ ಜೊತೆಗೆ ಸರ್ಕಾರವೂ ಸಹ ಅನುದಾನ ನೀಡುವಲ್ಲಿ ಮೀನಮೇಷ ಎಣಿಸುತ್ತಿದ್ದು ಉತ್ಸವ ಸದ್ಯಕ್ಕಂತೂ ನಡೆಯುವಂತೆ ಕಾಣುತ್ತಿಲ್ಲ.
ಉತ್ಸವ ಶುರುವಾಗಿದ್ದು ಯಾವಾಗ?: ಆದಿಲ್ ಶಾಹಿ ನಿರ್ಮಾಣದ ನವರಸಪುರ (ಸಂಗೀತ ಮಹಲ್)ನಲ್ಲಿ ರಾಜಮನೆತನ ಹಾಗೂ ಪ್ರಜೆಗಳ ಮನರಂಜನೆಗಾಗಿ ನಡೆಯುತ್ತಿದ್ದ ಸಂಗೀತ ಸಂಜೆ ಕಾರ್ಯಕ್ರಮ ಮುಂದೆ ನವರಸಪುರ ಉತ್ಸವವಾಗಿ ವಿಜಯಪುರ ಜಿಲ್ಲೆಯಲ್ಲಿ ಸಾಕಷ್ಟು ಪ್ರಸಿದ್ದಿ ಪಡೆದುಕೊಂಡಿದೆ. ಪ್ರತಿ ವರ್ಷ ರಾಜ್ಯ ಸರ್ಕಾರ ಉತ್ಸವ ಆಚರಣೆಗೆಂದು ಅನುದಾನ ನೀಡುತ್ತಿದೆ. ಈಗ ಉತ್ಸವ ನಡೆಯದ ಕಾರಣ ಆ ಅನುದಾನ ವಾಪಸಾಗುತ್ತಿದೆ. ವಿಜಯಪುರ ಜಿಲ್ಲೆಗೆ ಸಂಗೀತದ ರಸೌತಣ ನೀಡುತ್ತಿದ್ದ ನವರಸಪುರ ಉತ್ಸವ ಈಗ ಜನರ ಮನಸ್ಸಿನಿಂದಲೇ ಮರೆಯಾಗಿದೆ. ಇಂಥ ಉತ್ಸವಗಳಿಂದ ಸ್ಥಳೀಯ ಕಲಾವಿದರಿಗೆ ಆರ್ಥಿಕವಾಗಿ ಸಾಕಷ್ಟು ಅನುಕೂಲವಾಗುತ್ತಿತ್ತು. ಪ್ರವಾಸೋದ್ಯಮಕ್ಕೂ ಅನುಕೂಲವಾಗುತ್ತಿತ್ತು. ಕಳೆದ 8 ವರ್ಷದಲ್ಲಿ ಜಿಲ್ಲೆಯಲ್ಲಿ ಅತಿವೃಷ್ಟಿ, ಅನಾವೃಷ್ಟಿ ನಂತರ ಕೊವಿಡ್ 19ರ ಕಾರಣದಿಂದ ಉತ್ಸವ ಆಚರಣೆಯಾಗಿಲ್ಲ.
ಕಳೆದ 8 ವರ್ಷಗಳಿಂದ ಉತ್ಸವ ನಡೆಸುವಂತೆ ಸಾರ್ವಜನಿಕರು, ಕಲಾವಿದರು ಸಾಕಷ್ಟು ಒತ್ತಡವನ್ನು ಸ್ಥಳೀಯ ಜನಪ್ರತಿನಿಧಿಗಳಿಗೆ ಜಿಲ್ಲಾಡಳಿತ ಮೇಲೆ ಹೇರುತ್ತಲೇ ಬಂದಿದ್ದಾರೆ. ಆದರೂ ಜಿಲ್ಲಾಡಳಿತ ಕೋವಿಡ್ , ಅತಿವೃಷ್ಟಿ, ಅನಾವೃಷ್ಟಿ ಸೇರಿದಂತೆ ಇನ್ನಿತರ ಕಾರಣದ ನೆಪವೊಡ್ಡಿ ನವರಸಪುರ ಉತ್ಸವವನ್ನು ಮುಂದೂಡುತ್ತಲೇ ಬಂದಿದೆ.
ಎಲ್ಲೆಲ್ಲಿ ಉತ್ಸವ ನಡೆಯುತ್ತಿತ್ತು?: ನವರಸರಪುರ ಉತ್ಸವ ತೊರವಿಯ ನವರಸಪುರ, ನಗರದ ಗಗನ ಮಹಲ್, ಐತಿಹಾಸಿಕ ಗೋಳಗುಮ್ಮಟ ಆವರಣದಲ್ಲಿ ಸ್ಥಳಾವಕಾಶ ನೋಡಿಕೊಂಡು ಆಚರಿಸಲಾಗುತ್ತಿತ್ತು. ಕೊನೆಯ ಬಾರಿ 2015ರಲ್ಲಿ ನಗರದಲ್ಲಿ ನವರಸಪುರ ಉತ್ಸವ ಆಚರಿಸಲಾಗಿತ್ತು. ನಂತರ ಕೋವಿಡ್ ಹಾಗೂ ನೈಸರ್ಗಿಕ ವಿಕೋಪದ ಕಾರಣ ಉತ್ಸವ ರದ್ದಾಗುತ್ತಲೇ ಬಂದಿದೆ. ಈ ಉತ್ಸವ ನಡೆಸಲು ಸರ್ಕಾರ ನೀಡುವ ಅನುದಾನವನ್ನು ಬೇರಾವುದಕ್ಕೂ ಬಳಸಬಾರದು ಎನ್ನುವ ನಿಯಮಾವಳಿ ಸಹ ಇದೆ. ಆಕಸ್ಮಿಕವಾಗಿ ಉತ್ಸವ ಆಚರಣೆ ಮಾಡದಿದ್ದರೆ ಆ ಅನುದಾನ ಸರ್ಕಾರದ ಖಜಾನೆಗೆ ವಾಪಸ್ ಆಗುತ್ತದೆ. ಈಗಲೂ ಉತ್ಸವದ ಅನುದಾನ ಸರ್ಕಾರ ವಾಪಸ್ ಆಗಿದೆ.
ಹಂಪಿ ಉತ್ಸವ, ಚಿಕ್ಕಬಳ್ಳಾಪುರ ಉತ್ಸವ, ಬೆಂಗಳೂರು ಉತ್ಸವ, ಕಿತ್ತೂರ ಉತ್ಸವ ಸೇರಿದಂತೆ ಪ್ರತಿ ಜಿಲ್ಲೆಯಲ್ಲಿ ಆ ಜಿಲ್ಲೆಯ ಸಂಸ್ಕೃತಿಯ ಅನಾವರಣ ಬಿಂಬಿಸಿ, ಪ್ರವಾಸಿಗರನ್ನು ಸೆಳೆಯಲು ಇಂಥ ಉತ್ಸವ ಅಚರಿಸಲಾಗುತ್ತಿದೆ. ಆದರೆ ಆದಿಲ್ ಶಾಹಿಯ ಐತಿಹಾಸಿಕ ನಗರದಲ್ಲಿ ಪ್ರವಾಸಿ ತಾಣಗಳು ಹೆಚ್ಚಾಗಿದ್ದರೂ ಸಹ ನವರಸಪುರ ಉತ್ಸವ ಆಚರಣೆಗೆ ಆಳುವ ಸರ್ಕಾರಗಳ ಪ್ರತಿನಿಧಿಗಳು ನಿರಾಸಕ್ತಿ ತೋರಿಸುತ್ತಿದ್ದಾರೆ ಎಂದು ಸಾರ್ವಜನಿಕರು ದೂರುತ್ತಾರೆ.
ಚಳಿಗಾಲದ ಅಧಿವೇಶನದಲ್ಲಿ ಚರ್ಚೆ: ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ನವರಸಪುರ ಉತ್ಸವ ಕುರಿತು ಮುಖ್ಯಮಂತ್ರಿ ಬೊಮ್ಮಾಯಿ ಜೊತೆ ಮಾತುಕತೆ ನಡೆಸಿದ್ದರು. ಅವರಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ಬಂದಿತ್ತು. ಆದರೆ ಶ್ರೀಗಳ ಲಿಂಗೈಕ್ಯರಾದ ಕಾರಣ ಮನರಂಜನೆ ಕಾರ್ಯಕ್ರಮ ನಡೆಸಬಾರದು ಎಂದು ಸಂಕ್ರಮಣದ ಸಿದ್ದೇಶ್ವರ ಜಾತ್ರೆ ಸಹ ಸರಳವಾಗಿ ಆಚರಿಸಲಾಗುತ್ತಿದೆ.
ಅನುದಾನಕ್ಕೆ ಬೇಡಿಕೆ: ಸರ್ಕಾರದ ವತಿಯಿಂದ 5 ಕೋಟಿ ರೂ. ಗಳ ಅನುದಾನದ ಬೇಡಿಕೆಯನ್ನು ಜಿಲ್ಲಾಡಳಿತ ಇಟ್ಟಿದೆ. 3 ಕೋಟಿ ರೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ 2 ಕೋಟಿ ರೂ. ಪ್ರವಾಸೋದ್ಯಮ ಇಲಾಖೆಯಿಂದ ಹಣ ಬಿಡುಗಡೆಯಾದರೆ ಮುಂದೆ ಸ್ಥಳೀಯ ಶಾಸಕರು, ಗಣ್ಯರ ಅಭಿಪ್ರಾಯ ಸಂಗ್ರಹಿಸಿ ನವರಸಪುರ ಉತ್ಸವ ಆಚರಿಸಲು ಅಂತಿಮ ನಿರ್ಧಾರವನ್ನು ಜಿಲ್ಲಾಡಳಿತ ಕೈಗೊಳ್ಳಬಹುದು.
ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಮಾತನಾಡಿ, ನವರಸಪುರ ಉತ್ಸವ ಆಚರಣೆ ಬಗ್ಗೆ ಮರುಪರಿಶೀಲನೆ ನಡೆಯುತ್ತಿದೆ. ಭಕ್ತರು, ಸಾರ್ವಜನಿಕ ವಲಯದಲ್ಲಿ ನಡೆದಾಡುವ ದೇವರು ಸಿದ್ದೇಶ್ವರ ಶ್ರೀಗಳು ಲಿಂಗೈಕ್ಯರಾಗಿರುವ ಕಾರಣ ಉತ್ಸವ ಸದ್ಯ ಆಚರಣೆ ಮಾಡುವುದು ಸೂಕ್ತವಲ್ಲ ಎಂಬ ಅನಿಸಿಕೆ ಇದೆ. ಸಾಧಕ-ಬಾಧಕ ನೋಡಿಕೊಂಡು ಉತ್ಸವ ಆಚರಿಸಿದರೆ ಮತ್ತೊಮ್ಮೆ ಐತಿಹಾಸಿಕ ನಗರಿಯ ಗತವೈಭವ ಮರುಕಳಿಸಬಹುದು ಎಂದರು.
ಇದನ್ನೂ ಓದಿ:'ಚಿಕ್ಕಬಳ್ಳಾಪುರ ಉತ್ಸವ'ಕ್ಕೆ ವೈಭವದ ಚಾಲನೆ: 2 ಭಾರತ ರತ್ನ ಪಡೆದ ಜಿಲ್ಲೆ- ಸಿಎಂ ಗುಣಗಾನ