ವಿಜಯಪುರ : ಜೂನ್ ತಿಂಗಳಿನಿಂದ ಮುಂಗಾರು ಮಳೆ ಪ್ರಾರಂಭವಾಗಲಿದ್ದು, ಕೋಟಿ ವೃಕ್ಷ ಅಭಿಯಾನದಡಿ ಸಂಪೂರ್ಣ ಸಫಲತೆ ಸಾಧಿಸಲು ಎಲ್ಲರೂ ಒಟ್ಟಾಗಿ ಕಾರ್ಯ ನಿರ್ವಹಿಸಬೇಕು. ಜಿಲ್ಲೆಯಲ್ಲಿ 1 ಕೋಟಿ ಸಸಿ ಬೆಳೆಸುವ ಗುರಿ ತಲುಪಲು ಇನ್ನು 25 ಲಕ್ಷ ಸಸಿ ಬೆಳೆಸಬೇಕಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೋಟಿ ವೃಕ್ಷ ಅಭಿಯಾನದ ಪೂರ್ವ ಸಿದ್ಧತೆ ಸಭೆ ನಡೆಸಿ ಮಾತನಾಡಿದ ಅವರು, ಕಳೆದ ನಾಲ್ಕು ವರ್ಷಗಳಲ್ಲಿ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ 75 ಲಕ್ಷ ಸಸಿಗಳನ್ನು ನೆಡಲಾಗಿದೆ. ಈ ವರ್ಷ 25 ಲಕ್ಷ ಸಸಿಗಳನ್ನು ನಾನಾ ಪ್ರದೇಶಗಳಲ್ಲಿ ನೆಡುವುದರ ಮೂಲಕ 1 ಕೋಟಿ ಸಸಿಗಳ ಕಾರ್ಯ ಪೂರ್ಣಗೊಳಿಸಬೇಕು ಎಂದು ಹೇಳಿದರು.
ಭೂತನಾಳ ಕೆರೆಯ ಹತ್ತಿರವಿರುವ ಕರಾಡದೊಡ್ಡಿ ಸೇರಿದಂತೆ ಜಿಲ್ಲೆಯಾದ್ಯಂತ ಈಗಾಗಲೇ 75 ಲಕ್ಷ ಸಸಿಗಳು ಬೆಳೆದು ನಿಂತು, ಪಕ್ಷಿ ಸಂಕುಲಕ್ಕೆ ಆಸರೆ ಆಗುತ್ತಿವೆ. ಇದರಿಂದ ಜಿಲ್ಲೆಯಲ್ಲಿ ಅರಣ್ಯ ವಲಯವು ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಿಸಿಕೊಳ್ಳುತ್ತಿದೆ. ಅರಣ್ಯ ಪ್ರದೇಶ ವೃದ್ಧಿಸಲು ನಾವೆಲ್ಲರು ಹೆಚ್ಚಿನ ಒತ್ತು ನೀಡಬೇಕು ಎಂದರು.
ಈ ಸಾಲಿನಲ್ಲಿ ಒಟ್ಟು 25 ಲಕ್ಷ ಸಸಿಗಳನ್ನು ನೆಡುವ ಗುರಿ ಇರಿಸಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಈಗ ಕೆಬಿಜೆಎನ್‍ಎಲ್ ಹಾಗೂ ವಿವಿಧ ನರ್ಸರಿಗಳಿಂದ 8 ಲಕ್ಷ ಸಸಿಗಳನ್ನು ಗುರುತಿಸಿ ಜೂನ್ ತಿಂಗಳಿನಿಂದ ಕಾರ್ಯ ಪ್ರಾರಂಭಿಸಬೇಕು. ವಿವಿಧ ಜಾತಿಯ ಸಸಿಗಳನ್ನು ಜಿಲ್ಲೆಯ ವಾತಾವರಣಕ್ಕೆ ಹೊಂದಿಕೊಳ್ಳುವಂತೆ ನೋಡಿಕೊಳ್ಳಬೇಕು. ಅವುಗಳ ಸೂಕ್ತ ಪೋಷಣೆಯ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದರು.