ವಿಜಯಪುರ: ಪ್ರವಾಹ, ಪ್ರಕೃತಿ ವಿಕೋಪ, ಬೆಳೆಗೆ ವಿವಿಧ ರೋಗ ಬಾಧೆಯಿಂದ ನಷ್ಟ ಅನುಭವಿಸುತ್ತಿರುವ ಅನ್ನದಾತ ತನ್ನ ಬೆಳೆ ಹಾನಿಯ ವಿವರವನ್ನು ಫೋಟೋ ಸಮೇತ ದಾಖಲಿಸಲು ಸರ್ಕಾರ ಹೊಸ ಆ್ಯಪ್ ಆರಂಭಿಸಿದೆ. ಪ್ರತಿ ವರ್ಷ ಅಕಾಲಿಕ ಮಳೆ, ಬರದಿಂದ ತತ್ತರಿಸಿ ಹೋಗಿರುವ ರೈತ ಈಗ ಆಂಡ್ರಾಯ್ಡ್ ಮೊಬೈಲ್ ಬಳಸುವ ಸ್ಥಿತಿ ನಿರ್ಮಾಣವಾಗಿದೆ.
ಸರ್ಕಾರ ಈ ಆ್ಯಪ್ ಬಳಕೆಗೆ ಕಡಿಮೆ ಅವಧಿ ನಿಗದಿಪಡಿಸಿದ್ದು ಒಂದು ಕಡೆಯಾದರೆ, ಅನಕ್ಷರಸ್ಥ ರೈತರು ಆ್ಯಪ್ ಬಳಸಬಹುದಾ ಎಂಬ ಪ್ರಶ್ನೆ ಮತ್ತೊಂದೆಡೆ ಕಾಡುತ್ತಿದೆ. ಮುಂದಾಲೋಚನೆ ಇಲ್ಲದ ಈ ಯೋಜನೆಗೆ ರೈತ ವರ್ಗದಲ್ಲಿ ಮಿಶ್ರ ಪ್ರತಿಕ್ರಿಯೆ ಕೇಳಿ ಬಂದಿದೆ. ಬರದ ನಾಡು ವಿಜಯಪುರ ಜಿಲ್ಲೆಯಲ್ಲಿ ಅತಿವೃಷ್ಟಿ ಇಲ್ಲವೇ ಅನಾವೃಷ್ಟಿಯಿಂದ ಪ್ರತಿ ವರ್ಷ ಅನ್ನದಾತ ಬೆಳೆದ ಬೆಳೆಗಳು ನಾಶವಾಗುತ್ತಲೇ ಇರುತ್ತವೆ. ಈ ಬೆಳೆದ ಅಲ್ಪಸ್ವಲ್ಪ ಬೆಳಗೆ ಸೂಕ್ತ ಬೆಂಬಲ ಬೆಲೆ ಮಾತ್ರ ತಮಗೆ ತಲುಪುವದಿಲ್ಲ ಎನ್ನುವ ಆರೋಪಗಳು ರೈತರಿಂದ ಕೇಳಿಬರುತ್ತಿವೆ.
ಕಾಟಾಚಾರಕ್ಕೆ ಅಧಿಕಾರಿಗಳು ಬೆಳೆ ಸಮೀಕ್ಷೆ ನಡೆಸಿ ಕೈತೊಳೆದುಕೊಳ್ಳುವ ಕೆಲಸ ನಡೆಯುತ್ತಿವೆ. ಇದನ್ನು ತಪ್ಪಿಸಿ, ನಷ್ಟ ಅನುಭವಿಸಿದ ರೈತರಿಗೆ ಸೂಕ್ತ ಪರಿಹಾರ ದೊರಕಿಸಿಕೊಡಲು ಸರ್ಕಾರವು ರೈತರು ತಮ್ಮ ಬೆಳೆ ನಾಶವನ್ನು ತಾನೆ ಸಮೀಕ್ಷೆ ನಡೆಸಿ, ಮೊಬೈಲ್ ಮೂಲಕ ಅದನ್ನು ಅಪ್ಲೋಡ್ ಮಾಡಲು ಆ್ಯಪ್ ತಯಾರಿಸಿದೆ. ಸದ್ಯ ಈ ಆ್ಯಪ್ ಭರ್ತಿಗೆ ರೈತರಿಗೆ ಸರ್ಕಾರ ಕಾಲಾವಕಾಶ ನಿಗದಿ ಮಾಡಿದೆ. ಮೊದಲೇ ಅನಕ್ಷರಸ್ಥನಾಗಿರುವ ರೈತರಿಗೆ ಮೊಬೈಲ್ ಬಳಕೆಯೇ ಗೊತ್ತಿರುವುದಿಲ್ಲ. ಆ್ಯಪ್ ಬಳಸಲು ಆಂಡ್ರಾಯ್ಡ್ ಮೊಬೈಲ್ ಖರೀದಿಸಬೇಕಾಗಿದ್ದು, ಇದು ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ಸರಿಯಾದ ಪ್ರಚಾರ ಮಾಡದ ಈ ಯೋಜನೆ ಬಹುತೇಕ ರೈತರಿಗೆ ಗೊತ್ತೇ ಇಲ್ಲ. ಮೊಬೈಲ್ ಬಳಸುವ ರೈತ ಈ ಯೋಜನೆಯನ್ನು ಅರೆಮಾನದಿಂದಲೇ ನಿಂದಲೇ ಸ್ವಾಗತಿಸಿದ್ದಾನೆ.
ರೈತರ ಬೆಳೆ ಸಮೀಕ್ಷೆಗೆ ಇದೇ ಆ, 24 ಕೊನೆ ದಿನ ನೀಡಲಾಗಿದೆ. ಆದರೆ ಜಿಲ್ಲೆಯ ಬಹುತೇಕ ರೈತರು ಮೊಬೈಲ್ ಬಳಸುತ್ತಿದ್ದರೆ, ಅದು ಕೇವಲ ಮಾತನಾಡಲು ಮಾತ್ರ, ಇನ್ನೂ ಇಂಟರ್ ನೆಟ್ ಬಳಕೆ ಗೊತ್ತಿಲ್ಲ. ಅಂಥ ರೈತರು ಪೇಚಿಗೆ ಸಿಲುಕಿದ್ದಾರೆ. ಹೊಲದಲ್ಲಿ ಹೋಗಿ ತಮ್ಮ ನಷ್ಟವಾದ ಬೆಳೆಯ ಫೋಟೋ ತೆಗೆದು ಅಪ್ಲೋಡ್ ಮಾಡಲು ಹೋದರೆ ಮೊಬೈಲ್ ನೆಟ್ವರ್ಕ್ ಇಲ್ಲದ ಊರಲ್ಲಿ ಇಂಟರ್ನೆಟ್ ಎಲ್ಲಿಂದ ಬರಬೇಕು ಅನ್ನೋದು ರೈತರ ಪ್ರಶ್ನೆಯಾಗಿದೆ.
ಸದ್ಯ ಕಂದಾಯ ಇಲಾಖೆ ಮೊಬೈಲ್ ಮೂಲಕ ಬೆಳೆ ನಷ್ಟ ಕುರಿತು ಫೋಟೋ ಅಪ್ಲೋಡ್ ಮಾಡಲು ರೈತರು ಪಡುತ್ತಿರುವ ಕಷ್ಟವನ್ನು ಅರಿತಿದೆ. ಇದಕ್ಕಾಗಿ ಕಾಲಾವಕಾಶದ ಅವಧಿಯನ್ನು ವಿಸ್ತರಿಸಲು ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದೆ. ಇದರ ಜತೆ ಅವಧಿ ಮುಗಿದ ಮೇಲೆ ಮೊಬೈಲ್ ಬಳಕೆ ಮಾಡದ ರೈತರಿಗೆ ಗ್ರಾಮದ ಯುವಕರ ಮೂಲಕ ಅಪ್ ಲೋಡ ಮಾಡುವ ವ್ಯವಸ್ಥೆ ಮಾಡಲು ಯೋಚಿಸಿದೆ.
ಇದರ ಜತೆ ಕೃಷಿ ಇಲಾಖೆ ಹಳ್ಳಿ ಹಳ್ಳಿಗೆ ತೆರಳಿ ನೂತನ ಆ್ಯಪ್ ಬಗ್ಗೆ ರೈತರಿಗೆ ತರಬೇತಿ ನೀಡುವ ಕಾರ್ಯವನ್ನು ಮಾಡುತ್ತಿದೆ. ಆದರೆ ಬಡತನದಲ್ಲಿ ಪರದಾಡುತ್ತಿರುವ ರೈತರಿಗೆ ಮೊಬೈಲ್ ಬಳಕೆ ಮತ್ತೊಂದು ಹೊರೆಯಾಗಬಹುದಾಗಿದೆ. ಈಗಲೇ ತಮ್ಮ ಮಕ್ಕಳ ಆನ್ಲೈನ್ ಶಿಕ್ಷಣಕ್ಕೆ ಸಾವಿರಾರು ರೂ. ಖರ್ಚು ಮಾಡಿರುವ ಅನ್ನದಾತರು ಮತ್ತೆ ಬೆಳೆ ಸಮೀಕ್ಷೆ ಆ್ಯಪ್ ಬಳಸಲು ಮೊಬೈಲ್ ಖರೀದಿ ಮಾಡಬೇಕೋ ಇಲ್ಲವೋ ಎನ್ನುವ ಗೊಂದಲದಲ್ಲಿ ಸಿಲುಕಿ ನರಳಾಡುವಂತಾಗಿದೆ. ಇದನ್ನು ತಪ್ಪಿಸಲು ಈ ಯೋಜನೆಯನ್ನು ಗ್ರಾಮ ಸಹಾಯಕರ ಹೆಗಲಿಗೆ ಏರಿಸಲಿ ಎನ್ನುವುದು ರೈತರ ಮನವಿಯಾಗಿದೆ.