ವಿಜಯಪುರ: ಕಳೆದ ಮೂರು ದಿನಗಳಿಂದ ಜಿಲ್ಲೆಯ ವಿವಿಧೆಡೆ ಉಂಟಾಗಿರುವ ಅಕಾಲಿಕ ಮಳೆಯಿಂದ ರೈತರು ಬೆಳೆದ ಬೆಳೆಗೆ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಸುನೀಲ್ ಕುಮಾರ್ ತಿಳಿಸಿದ್ದಾರೆ. ಮುದ್ದೇಬಿಹಾಳ ತಾಲೂಕಿನಲ್ಲಿ ಹುಲಗಪ್ಪ ಸಾಬಣ್ಣ ಖಿಲಾರಹಟ್ಟಿ ಎಂಬುವರು ಸಿಡಿಲು ಬಡಿದು ಗಾಯಗೊಂಡಿದ್ದಾರೆ. ಜಮೀನಿನಲ್ಲಿ ಶೇಖರಿಸಿಟ್ಟಿದ್ದ 2 ಟ್ರ್ಯಾಕ್ಟರ್ ಜೋಳದ ಕಣಕಿ ಸಿಡಿಲಿನಿಂದಾಗಿ ಸುಟ್ಟು ಹೋಗಿದೆ.
ಬಸವನಬಾಗೇವಾಡಿ ತಾಲೂಕಿನಲ್ಲಿ ಎಕರೆ 20 ಗುಂಟೆಯಲ್ಲಿ ಬೆಳೆದ ಬಾಳೆ ಗಿಡಗಳು, ಆಲಮೇಲದಲ್ಲಿ ನಿಂಬೆಗಿಡಗಳು, ಕೋಲ್ಹಾರ ತಾಲೂಕಿನ ತೆಲಗಿ ಗ್ರಾಮದಲ್ಲಿ 3 ಕಚ್ಚಾ ಮನೆಗಳು, ಕುರುಬರ ದಿನ್ನಿ ಗ್ರಾಮದಲ್ಲಿ 1 ಎಕರೆ ಎಲೆ ತೋಟದಲ್ಲಿ ಎಲೆ ಮರಗಳು ಬಿದ್ದು ಹೋಗಿವೆ. ತಡಲಗಿ ಗ್ರಾಮದಲ್ಲಿ 2 ಎಕರೆ ಎಲೆ ತೋಟದಲ್ಲಿ ಎಲೆ ಮರಗಳು ಬಿದ್ದು ಹಾನಿಯಾಗಿವೆ ಎಂದು ಡಿಸಿ ತಿಳಿಸಿದ್ದಾರೆ.
ಬಬಲೇಶ್ವರ ತಾಲೂಕಿನ ನಿಡೋಣಿ ಗ್ರಾಮದಲ್ಲಿ ಮನುಕ ಶೆಡ್ಡಿನ ಶಿಂಪುಲಿನ ಕಾಗದ ಶೆಡ್ಡಿನಲ್ಲಿರುವ ಒಣ ದ್ರಾಕ್ಷಿ, ತಿಗಣಿಬಿದರಿ ಗ್ರಾಮದಲ್ಲಿ ಮನುಕ ಶೆಡ್ಡಿನ ಶಿಂಪುಲಿನ ಕಾಗದ ಶೆಡ್ನಲ್ಲಿರುವ ಒಣ ದ್ರಾಕ್ಷಿ, ಬಬಲೇಶ್ವರ ಗ್ರಾಮದಲ್ಲಿ 5 ಗುಂಟೆಯಲ್ಲಿ ಬೆಳೆದ ದ್ರಾಕ್ಷಿಗೆ ಹಾನಿಯಾಗಿದೆ. ಬಬಲೇಶ್ವರ ಗ್ರಾಮದಲ್ಲಿ 10 ಗುಂಟೆ ಬಾಳೆ, 20 ಗುಂಟೆ ನುಗ್ಗೆ ಹಾಗೂ 10 ಗುಂಟೆ ಮಾವಿನ ಗಿಡಗಳು ಹಾನಿಯಾಗಿವೆ ಎಂದು ಜಿಲ್ಲಾಧಿಕಾರಿ ವಿವರ ನೀಡಿದರು.
ಅಕಾಲಿಕ ಮಳೆಯಿಂದ ಬಾಳೆ ಗಿಡಗಳು ನೆಲ ಕಚ್ಚಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಪಡನೂರ ಗ್ರಾಮದಲ್ಲಿ ನಡೆದಿದೆ. ಸರ್ಕಾರ ಪ್ರಕೃತಿ ವಿಕೋಪದಡಿಯಲ್ಲಿ ಪರಿಹಾರ ವಿತರಣೆ ಮಾಡಬೇಕು. ಇಲ್ಲದೇ ಹೋದರೆ ನಮ್ಮ ಜೀವನ ಬೀದಿಗೆ ಬರುತ್ತದೆ ಎಂದು ರೈತರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಅಲ್ಪಸಂಖ್ಯಾತರ ಓಲೈಕೆಗಾಗಿ ಎಷ್ಟು ದಿನ ಸುಳ್ಳು ಸುದ್ದಿ ಹಬ್ಬಿಸುತ್ತೀರಿ?: ರೇಣುಕಾಚಾರ್ಯ