ವಿಜಯಪುರ: ಇಡೀ ಕರ್ನಾಟಕ-ಮಹಾರಾಷ್ಟ್ರ ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಭೀಮಾತೀರದ ಇತಿಹಾಸ ಮತ್ತೆ ತೆರೆದುಕೊಂಡಿದೆ. ಚಿನ್ನಾಭರಣ ವ್ಯಾಪಾರಿಯೊಬ್ಬನಿಂದ 5 ಕೋಟಿ ರೂಪಾಯಿ ಹಣದ ಬೇಡಿಕೆ ಪ್ರಕರಣ ಮತ್ತೊಮ್ಮೆ ಭೀಮಾ ತೀರದಲ್ಲಿ ಸದ್ದು ಮಾಡಿದೆ.
ಮನೆತನದ ಹಗೆತನದಲ್ಲಿ ಸದಾ ದ್ವೇಷ ಸಾಧಿಸುತ್ತಿರುವ ಭೀಮಾ ತೀರದ ನಟೋರಿಯಸ್ ರೌಡಿಗಳು ಇನ್ನೂ ತೆರೆಮರೆಯಲ್ಲಿ ಅಪರಾಧ ಪ್ರಕರಣಗಳಲ್ಲಿ ತೊಡಗಿದ್ದಾರೆ. ಭೀಮಾ ತೀರದ ಹಂತಕ ಚಂದಪ್ಪ ಹರಿಜನ ಹತ್ಯೆ ನಂತರ ಅಪರಾಧ ಚಟುವಟಿಕೆಗಳು ಅಲ್ಲಲ್ಲಿ ಕೇಳಿಬರುತ್ತಿದ್ದವು. ನಂತರ ಹೆಚ್ಚು ಸದ್ದು ಮಾಡಿದ್ದು ಕುಖ್ಯಾತ ಹಂತಕರಾಗಿದ್ದ ಧರ್ಮರಾಜ ಹಾಗೂ ಗಂಗಾಧರ ಚಡಚಣ ಸಹೋದರರ ಹತ್ಯೆಯಲ್ಲಿ ಪೊಲೀಸರು ಭಾಗಿಯಾಗಿರುವ ಸುದ್ದಿ.
ಆದರೆ ಈಗ ಮತ್ತೊಮ್ಮೆ ಭೀಮಾ ತೀರದ ಚರಿತ್ರೆ ಸದ್ದು ಮಾಡುತ್ತಿದೆ. ಚಿನ್ನದ ವ್ಯಾಪಾರಿ ನಾಮದೇವ ಡಾಂಗೆ ಅವರಿಗೆ ಹಣಕ್ಕಾಗಿ ಬೇಡಿಕೆ ಇಟ್ಟ ಪ್ರಕರಣದಲ್ಲಿ ಸಂಚಲನ ಸೃಷ್ಟಿಯಾಗಿದೆ. ನಿನ್ನೆ ಕೆರೂರ ಗ್ರಾಮದ ಮಹಾದೇವ ಸಾಹುಕಾರ ಭೈರಗೊಂಡನನ್ನು ಬಂಧಿಸಿದ ಮೇಲೆ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಹಂತಕ ಭಾಗಪ್ಪ ಹರಿಜನ ಹಾಗೂ ಲಕ್ಷ್ಮಿಕಾಂತ ಪಾಟೀಲ ಭಾಗಿಯಾಗಿದ್ದು ಅವರ ಬಂಧನಕ್ಕೆ ಪೊಲೀಸರು ಬೆಲೆ ಬೀಸಿದ್ದಾರೆ.
ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳ ಮೇಲೆ ಸಾಕಷ್ಟು ಪ್ರಕರಣಗಳು ದಾಖಲಾಗಿವೆ. ಭೀಮಾ ತೀರದ ಹಂತಕ ಭಾಗಪ್ಪ ಹರಿಜನ ಮೇಲೆ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 3-4 ಕೊಲೆ ಪ್ರಕರಣ, ಸುಲಿಗೆ, ಜೀವಬೆದರಿಕೆ ಸೇರಿವೆ. ಇನ್ನೊಬ್ಬ ಆರೋಪಿ ಲಕ್ಷ್ಮಿಕಾಂತ ಪಾಟೀಲ ವಿರುದ್ಧವೂ ಸಹ 4-5 ಪ್ರಕರಣ ದಾಖಲಾಗಿವೆ. ಇಬ್ಬರು ಸಹ ಪೊಲೀಸರಿಗೆ ಮೋಸ್ಟ್ ವಾಂಟೆಡ್ ಕ್ರಿಮಿನಲ್ಗಳೇ ಆಗಿದ್ದಾರೆ.
ಚಿನ್ನದ ವ್ಯಾಪಾರಿಯಿಂದ 5 ಕೋಟಿ ರೂ. ಇಲ್ಲವೇ 3 ಕೆ.ಜಿ ಚಿನ್ನಾಭರಣ ಬೇಡಿಕೆ ಇಟ್ಟು ಜೈಲು ಸೇರಿರುವ ಮಹಾದೇವ ಸಾಹುಕಾರ ಭೈರಗೊಂಡ ವಿರುದ್ಧವೂ ಸಹ 7-8 ಪ್ರಕರಣ ದಾಖಲಾಗಿವೆ. ಇದರಲ್ಲಿ ಕೊಲೆ, ಕೊಲೆ ಯತ್ನ, ಅಪಹರಣ ಸೇರಿವೆ.
ಭೀಮಾ ತೀರದ ಹಂತಕರಾದ ಗಂಗಾಧರ ಚಡಚಣ ಹತ್ಯೆ ಹಾಗೂ ಧರ್ಮರಾಜ್ ಚಡಚಣ ಎನ್ಕೌಂಟರ್ ಪ್ರಕರಣದ ಆರೋಪಿಯಾಗಿ ಜೈಲುವಾಸ ಅನುಭವಿಸಿರುವ ಮಹಾದೇವ ಭೈರಗೊಂಡ ಆ ಪ್ರಕರಣದಲ್ಲಿ ಹೈಕೋರ್ಟ್ನಿಂದ ಜಾಮೀನು ಪಡೆದು ಹೊರಬಂದಿದ್ದನು. ಈಗ ಹಣದ ಬೇಡಿಕೆಯ ಪ್ರಕರಣದಲ್ಲಿ ಮತ್ತೆ ಜೈಲು ಸೇರಿದ್ದಾನೆ.