ವಿಜಯಪುರ: ಜಿಲ್ಲೆಯಲ್ಲಿ ಪದವಿ ಕಾಲೇಜುಗಳು ಆರಂಭವಾಗಿ ಐದು ದಿನ ಕಳೆದಿದ್ದು, ಇಲ್ಲಿಯವರೆಗೆ 1,020 ವಿದ್ಯಾರ್ಥಿಗಳು ಕೊರೊನಾ ಟೆಸ್ಟ್ಗೆ ಒಳಗಾಗಿದ್ದಾರೆ. ಅವರಲ್ಲಿ 6 ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ತಿಳಿಸಿದ್ದಾರೆ.
ಸೋಂಕಿತ 6 ವಿದ್ಯಾರ್ಥಿಗಳನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಾಸಿಟಿವ್ ಬಂದ ವಿದ್ಯಾರ್ಥಿಗಳ ಜತೆ ಸಂಪರ್ಕ ಇರುವ ವಿದ್ಯಾರ್ಥಿಗಳನ್ನು ಸಹ ಕಡ್ಡಾಯವಾಗಿ ಹೋಮ್ ಕ್ವಾರಂಟೈನ್ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರತಿ ಕಾಲೇಜುಗಳಲ್ಲಿ ಕೊರೊನಾ ಟೆಸ್ಟ್ ಮಾಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಇದರ ಜತೆ ಪ್ರತಿ ದಿನ ಕಾಲೇಜ್ ಆರಂಭವಾಗುವ ಮುನ್ನ ಕೋಣೆಗಳಲ್ಲಿ ಸ್ಯಾನಿಟೈಸರ್ ಮೂಲಕ ಶುಚಿಗೊಳಿಸಿ ನಂತರ ಕ್ಲಾಸ್ ಆರಂಭಿಸಬೇಕು ಎಂದು ಕಾಲೇಜು ಮುಖ್ಯಸ್ಥರಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಜ್ವರ, ಕೆಮ್ಮು ಇದ್ದರೆ ಅವರಿಗೆ ಕಾಲೇಜು ಪ್ರವೇಶಕ್ಕೆ ಅವಕಾಶ ನೀಡಲಾಗುವುದಿಲ್ಲ. ರೋಗದ ಲಕ್ಷಣಗಳಿರುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಸ್ವ್ಯಾಬ್ಟೆಸ್ಟ್ಗೆ ಒಳಗಾಗಿ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆದುಕೊಂಡು ಸಂಪೂರ್ಣ ಗುಣಮುಖರಾದ ನಂತರ ಕಾಲೇಜಿಗೆ ಹಾಜರಾಗಬೇಕು ಜಿಲ್ಲಾಧಿಕಾರಿ ಸಲಹೆ ನೀಡಿದ್ದಾರೆ.