ವಿಜಯಪುರ: ಸಿಂದಗಿ ಉಪಚುನಾವಣೆಗೆ ಮತದಾನ ಬಹುತೇಕ ಶಾಂತಿಯುತವಾಗಿ ನಡೆದಿದೆ. ಒಟ್ಟು ಶೇ. 69.47ರಷ್ಟು ಮತದಾನ ನಡೆದಿದ್ದು, ಶೇ. 70.99ರಷ್ಟು ಪುರುಷರು, ಶೇ. 67.85ರಷ್ಟು ಮಹಿಳೆಯರು ಹಾಗು ಶೇ. 9.38ರಷ್ಟು ಇತರರು ಮತ ಚಲಾಯಿಸಿದ್ದಾರೆ.
ಮತದಾರರ ವಿವರ:
ಸಿಂದಗಿ ಕ್ಷೇತ್ರದಲ್ಲಿ ಒಟ್ಟು 2,34,437 ಮತದಾರರಿದ್ದಾರೆ. 1,30,939 ಪುರುಷರು, 1,13,466 ಮಹಿಳೆಯರು ಹಾಗು 32 ಮಂದಿ ಇತರೆ ಮತದಾರರಿದ್ದಾರೆ. ಅವರಲ್ಲಿ 85,859 ಪುರುಷರು, 76,990 ಮಹಿಳೆಯರು ಹಾಗು 3 ಇತರೆ ಮತದಾರರು ಸೇರಿ ಒಟ್ಟು 1,62,852 ಮತದಾರರು ನಿನ್ನೆ (ಶನಿವಾರ) ತಮ್ಮ ಮತ ಚಲಾಯಿಸಿದ್ದಾರೆ.
ಕಳೆದ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಒಟ್ಟು 2,23,059 ಮತದಾರರಿದ್ದರು. ಅವರಲ್ಲಿ 1,15,455 ಪುರುಷರು, 1,07,604 ಮಹಿಳೆಯರು ಹಾಗು ಇತರೆ 33 ಮತದಾರರಿದ್ದರು. ಆ ಚುನಾವಣೆಯಲ್ಲಿ ಶೇ. 70.85 ಮತದಾನವಾಗಿತ್ತು.
2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ರಮೇಶ ಭೂಸನೂರ ಜೆಡಿಎಸ್ ಅಭ್ಯರ್ಥಿ ಎಂ.ಸಿ.ಮನಗೂಳಿ ಎದುರು 9,305 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. ಈ ಬಾರಿ ಮತ್ತೆ ಭೂಸನೂರ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಕಳೆದ ಚುನಾವಣೆಯಲ್ಲಿ ಗೆದ್ದಿದ್ದ ಜೆಡಿಎಸ್ ಅಭ್ಯರ್ಥಿ ಎಂ.ಸಿ.ಮನಗೂಳಿ ಪುತ್ರ ಅಶೋಕ ಮನಗೂಳಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿ ಕಣದಲ್ಲಿದ್ದಾರೆ. ಹೊಸ ಅಭ್ಯರ್ಥಿಯಾಗಿ ಜೆಡಿಎಸ್ನಿಂದ ಅಲ್ಪಸಂಖ್ಯಾತ ಮಹಿಳೆ ನಾಜಿಯಾ ಅಂಗಡಿ ಕಣದಲ್ಲಿದ್ದಾರೆ.
ಸ್ಟ್ರಾಂಗ್ ರೂಂನಲ್ಲಿ ಭವಿಷ್ಯ ಭದ್ರ:
ನಿನ್ನೆ (ಶನಿವಾರ) ನಡೆದ ಮತದಾನ ಹಿನ್ನೆಲೆಯಲ್ಲಿ 271 ಮತಗಟ್ಟೆಯ ಮತದಾರರು ನೀಡಿರುವ ತೀರ್ಪಿನ ಮತಪೆಟ್ಟಿಗೆಯನ್ನು ವಿಜಯಪುರದ ಸೈನಿಕ ಶಾಲೆ ಸ್ಟ್ರಾಂಗ್ ರೂಂನಲ್ಲಿ ಇಂದು ಬೆಳಗ್ಗೆ ಪೊಲೀಸ್ ಭದ್ರತೆಯಲ್ಲಿ ಭದ್ರಪಡಿಸಲಾಗಿದೆ. ನ.2ರಂದು ಬೆಳಗ್ಗೆ 8 ಗಂಟೆಗೆ ಮತಪೆಟ್ಟಿಗೆ ತೆರೆಯಲಿದ್ದು, ಮತ ಎಣಿಕೆ ಕಾರ್ಯ ಆರಂಭವಾಗಲಿದೆ. ಸಂಜೆ ವೇಳೆಗೆ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ಇದನ್ನೂ ಓದಿ: ಬೈ ಎಲೆಕ್ಷನ್: ಹಾನಗಲ್ನಲ್ಲಿ ಶೇ 84. ಸಿಂದಗಿ ಕ್ಷೇತ್ರದಲ್ಲಿ ಶೇ. 69 ರಷ್ಟು ವೋಟಿಂಗ್