ವಿಜಯಪುರ: ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಜಿಲ್ಲೆಯ ಹಲವು ಸರ್ಕಾರಿ ಕಚೇರಿಗಳ ಸಿಬ್ಬಂದಿಗೂ ಕೂಡ ಸೋಂಕು ತಗುಲಿದ್ದು, ಕಚೇರಿಗಳನ್ನು ಸೀಲ್ಡೌನ್ ಮಾಡಲಾಗಿದೆ.
ಜಿಲ್ಲೆಯ ಎನ್ಟಿಪಿಸಿ, ಮಹಿಳಾ ವಿಶ್ವವಿದ್ಯಾಲಯದಲ್ಲಿ ಕೊರೊನಾ ಸೋಂಕಿತರು ಪತ್ತೆಯಾದ ಹಿನ್ನೆಲೆಯಲ್ಲಿ ಅವನ್ನು ಸೀಲ್ಡೌನ್ ಮಾಡಲಾಗಿತ್ತು. ನಂತರ ನಗರಾಭಿವೃದ್ಧಿ ಕಚೇರಿ ಅಧ್ಯಕ್ಷರಿಗೆ ಸೋಂಕು ದೃಢಪಟ್ಟಿದ್ದು, ಈ ಕಚೇರಿಯನ್ನು ಕೂಡ ಸೀಲ್ಡೌನ್ ಮಾಡಲಾಗಿತ್ತು.
ಆ ಬಳಿಕ ಬಿಡಿಎ ಕಚೇರಿ, ವಿದ್ಯುತ್ ಸರಬರಾಜು ನಿಗಮದ ಕಚೇರಿ, ಎಸ್ಬಿಐ ಬ್ಯಾಂಕ್ ಹಾಗೂ ಜಿಲ್ಲೆಯ ನಾಲ್ಕು ಪೊಲೀಸ್ ಠಾಣೆ ಸೇರಿದಂತೆ ಹಲವು ಸರ್ಕಾರಿ ಕಚೇರಿಗಳ ಸಿಬ್ಬಂದಿಗೆ ಸೋಂಕು ತಗುಲಿತ್ತು. ಹೀಗಾಗಿ ಕೆಲ ದಿನಗಳ ಕಾಲ ಈ ಕಚೇರಿಗಳನ್ನು ಸೀಲ್ಡೌನ್ ಮಾಡಿ, ಬಳಿಕ ಸಾರ್ವಜನಿಕರ ಪ್ರವೇಶಕ್ಕೆ ಅನುವು ಮಾಡಿಕೊಡಲಾಗಿತ್ತು.
ಸದ್ಯ, ಮುಂಜಾಗ್ರತಾ ಕ್ರಮವಾಗಿ ಕಚೇರಿಗೆ ಬರುವ ಸಾರ್ವಜನಿಕರನ್ನು ಮೊದಲು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಅಗತ್ಯವಿದ್ದರೆ ಮಾತ್ರ ಸ್ಯಾನಿಟೈಸ್ ಹಾಗೂ ಸ್ಕ್ರೀನಿಂಗ್ ಮಾಡಿ ಒಳಗೆ ಬಿಡಲಾಗುತ್ತಿದೆ.