ವಿಜಯಪುರ: ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯದ ಮೇಲೂ ಕೊರೊನಾ ದಾಳಿ ಮಾಡಿದ್ದು, ಸೋಂಕಿನಿಂದ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ.
ಶೈಕ್ಷಣಿಕ ವಿಭಾಗದಲ್ಲಿ ಅಟೆಂಡರ್ ಆಗಿದ್ದ 52 ವರ್ಷದ ವ್ಯಕ್ತಿ ಸಾವೀಗಿಡಾಗಿದ್ದಾರೆ. ಸಾವನ್ನಪ್ಪಿರುವ ಅಟೆಂಡರ್ ಕೆಲಸ ಮಾಡುತ್ತಿದ್ದ ಶೈಕ್ಷಣಿಕ ವಿಭಾಗಕ್ಕೆ ಸಿಬ್ಬಂದಿ ಸ್ಯಾನಿಟೈಸ್ ಮಾಡಿದ್ದಾರೆ. ಶೈಕ್ಷಣಿಕ ವಿಭಾಗ ತಾತ್ಕಾಲಿಕ ಬಂದ್ ಮಾಡಲಾಗಿದೆ. ಈ ವಿಭಾಗದಲ್ಲಿ ಕೆಲಸ ಮಾಡ್ತಿದ್ದ 12 ಜನ ಸಿಬ್ಬಂದಿಯನ್ನೂ ಹೋಮ್ ಕ್ವಾರಂಟೈನ್ ಮಾಡಲಾಗಿದೆ.
ವಿಶ್ವವಿದ್ಯಾಲಯಕ್ಕೆ ಭೇಟಿಗೆ ಬರುವವರ ಸ್ಕ್ರಿನಿಂಗ್, ಸ್ಯಾನಿಟೈಸ್ ಮಾಡುವಂತೆ ಹಂಗಾಮಿ ಕುಲಪತಿ ಓಂಕಾರ ಕಾಕಡೆ ಸೂಚನೆ ನೀಡಿದ್ದಾರೆ. ಎಲ್ಲ ವಿಭಾಗಗಳ ಕಟ್ಟಡವನ್ನು ಸಿಬ್ಬಂದಿ ಸ್ಯಾನಿಟೈಸ್ ನಡೆಸುತ್ತಿದ್ದಾರೆ. ವಿಶ್ವವಿದ್ಯಾಲಯದ 250 ಕ್ಕೂ ಅಧಿಕ ಸಿಬ್ಬಂದಿಯಲ್ಲಿ ಆತಂಕ ಮನೆ ಮಾಡಿದೆ. ಎಲ್ಲರ ಗಂಟಲು ದ್ರವ ಮಾದರಿ ಪರೀಕ್ಷೆಗೆ ಹಂಗಾಮಿ ಕುಲಪತಿಗಳು ಮುಂದಾಗಿದ್ದಾರೆ.
ಈಗಾಗಲೇ 180ಕ್ಕೂ ಅಧಿಕ ಸಿಬ್ಬಂದಿಯ ಗಂಟಲು ದ್ರವ ಮಾದರಿಯನ್ನು ಆರೋಗ್ಯ ಇಲಾಖೆ ಪಡೆದುಕೊಂಡಿದೆ. ಕಳೆದ ಒಂದು ವಾರದಿಂದ ರಜೆ ಮೇಲಿದ್ದ ಮೃತ ಅಟೆಂಡರ್. ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ತಾವೆ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ನಿನ್ನೆ ಸಾವನ್ನಪ್ಪಿದ್ದಾರೆ. ಅವರು ಹೃದಯ ಸಂಬಂಧಿ ಕಾಯಿಲೆ, ಡಯಾಬಿಟಿಸ್, ಬಿ.ಪಿಯಿಂದ ಬಳಲುತ್ತಿದ್ದರು.