ವಿಜಯಪುರ : ಕೊರೊನಾ ಭೀತಿಯಿಂದ ಇಡೀ ದೇಶಕ್ಕೆ ಸರ್ಕಾರ ಬೀಗ ಜಡಿದು, ವೈರಸ್ ನಿಯಂತ್ರಕ್ಕೆ ಪಣತೊಟ್ಟಿತ್ತು. ಆದರೆ, 70 ದಿನಗಳ ಕಾಲ ರಸ್ತೆ ಬದಿ ವ್ಯಾಪಾರಿಗಳಿಗೆ ದುಡಿಮೆವಿಲ್ಲದೆ ಆರ್ಥಿಕ ಸಂಕಷ್ಟ ಒಂದು ಕಡೆಯಾದ್ರೇ, ಇದೀಗ ವ್ಯಾಪಾರಿಗಳು ಗ್ರಾಹಕರ ಕೊರತೆಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಗುಮ್ಮಟ ನಗರಿ ವಿಜಯಪುರ ನಗರದಲ್ಲಿ ಲಾಕ್ಡೌನ್ ಸಡಿಲಿಕೆಗೊಂಡ ಬಳಿಕ, ಹಣ್ಣುಗಳ ವ್ಯಾಪಾರ ಮಂಕಾಗಿದೆ. ನಗರದ ಎಲ್‌ಬಿಎಸ್ ಹಾಗೂ ಜನತಾ ಮಾರುಕಟ್ಟೆಯಲ್ಲಿ ಹಣ್ಣುಗಳ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿತ್ತು. ಆದರೆ, ಕೊರೊನಾ ಭೀತಿಯಿಂದ ಹಣ್ಣುಗಳ ಬೆಲೆ ಏರಿಕೆಯ ಪರಿಣಾಮ ಗ್ರಾಹಕರಿಗೆ ಹಣ್ಣುಗಳ ಬಿಸಿ ತಟ್ಟಿದಂತಾಗಿದೆ.
ಮಾರುಕಟ್ಟೆಯಲ್ಲಿ ಗ್ರಾಹಕರು ಹಣ್ಣುಗಳ ಬೆಲೆ ಕೇಳಿ ಮುಂದೆ ಸಾಗುವ ದೃಶ್ಯ ಕಂಡು ಬರುತ್ತಿದೆ. ಹಣ್ಣುಗಳನ್ನು ಕೊಂಡುಕೊಳ್ಳಲು ಬಂದರೆ ವ್ಯಾಪಾರಿಗಳು ದುಬಾರಿ ಬೆಲೆ ಹೇಳುತ್ತಿದ್ದಾರೆ. ಹೀಗಾಗಿ ಹಣ್ಣುಗಳನ್ನು ಖರೀದಿ ಮಾಡಲು ಕಷ್ಟವಾಗುತ್ತಿದೆ ಎನ್ನುತ್ತಾರೆ ಗ್ರಾಹಕರು.
ಹೊರ ರಾಜ್ಯಗಳಿಂದ ಸಾರಿಗೆ ಬಂದ್ ಆಗಿರುವ ಪರಿಣಾಮ, ನಿರೀಕ್ಷಿತ ಪ್ರಮಾಣದಲ್ಲಿ ಹಣ್ಣುಗಳು ಮಾರುಕಟ್ಟೆಗೆ ಬಾರದಿರುವುದು ಹಣ್ಣುಗಳ ಬೆಲೆಯಲ್ಲಿ ಏರಿಕೆ ಕಂಡಿದೆ. ಮಾರುಕಟ್ಟೆಯಲ್ಲಿ ದುಬಾರಿ ಬೆಲೆ ಕೊಟ್ಟು ಹಣ್ಣುಗಳನ್ನು ಮಾರಾಟ ಮಾಡಲು ಬಂದ್ರೆ ಹೆಚ್ಚಿನ ಗ್ರಾಹಕರು ಹಣ್ಣುಗಳನ್ನು ಖರೀದಿ ಮಾಡದಿರುವುದು ರಸ್ತೆ ಬದಿ ವ್ಯಾಪಾರಿಗಳ ಚಿಂತೆಗೆ ಕಾರಣವಾಗಿದೆ.
ಲಾಕ್ಡೌನ್ ಎಫೆಕ್ಟ್ನಿಂದ ಕೆಜಿ ಸೇಬು ಹಣ್ಣಿನ ₹200, ಆ್ಯರೇಂಜ್ ಬೆಲೆ 140 ರೂ., ಪೇರ್ ಹಣ್ಣು ತಲಾ ಒಂದಕ್ಕೆ 25 ರೂ. ಡಜನ್ ಬಾಳೆ ಹಣ್ಣಿಗೆ 40ರಿಂದ 60 ರೂ. ಡ್ರ್ಯಾಗನ್ ಕೆಲವೊಂದಕ್ಕೆ 60ರೂ., ಕಲ್ಲಂಗಡಿ ಹಣ್ಣು 50 ರೂ. ಹಾಗೂ ಕೆಜಿ ದಾಳಿಂಬೆ ಹಣ್ಣು ₹160 ಗಡಿ ತಲುಪಿದ ಪರಿಣಾಮ, ಗುಮ್ಮಟ ನಗರಿಯ ಜನರು ಹಣ್ಣುಗಳ ಖರೀದಿ ಮಾಡುವುದನ್ನೇ ಮರೆಯುವಂತಾಗಿದೆ.
ಬೆಲೆ ಏರಿಕೆ ಕುರಿತು ವ್ಯಾಪಾರಿಗಳನ್ನು ಕೇಳಿದರೆ ಮಾರುಕಟ್ಟೆಗೆ ಹೆಚ್ಚಾಗಿ ಹಣ್ಣುಗಳು ಆಮದಾಗುತ್ತಿಲ್ಲ. ಹೀಗಾಗಿ ಇರುವ ಹಣ್ಣುಗಳು ತಂದು ಮಾರಾಟ ಮಾಡೋಣ ಅಂದ್ರೆ ಗ್ರಾಹಕರು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿಲ್ಲ ಎನ್ನುತ್ತಾರೆ. 70 ದಿನಗಳ ಕಾಲ ಉದ್ಯೋಗವಿಲ್ಲದೆ ಆರ್ಥಿಕ ಸಂಕಷ್ಟದಲ್ಲಿದ್ದ ಹಣ್ಣಿನ ವ್ಯಾಪಾರಿಗಳು, ಈಗ ಗ್ರಾಹಕರು ಖರೀದಿಗೆ ಹಿಂದೇಟು ಹಾಕುತ್ತಿರುವುದರಿಂದ ಮತ್ತಷ್ಟು ಸಮಸ್ಯೆಯ ಸುಳಿಗೆ ಸಿಲುಕಿದ್ದಾರೆ.