ಮುದ್ದೇಬಿಹಾಳ: ಮಾಸ್ಕ್ ಧರಿಸದೆ ಕೊರೊನಾ ನಿಯಮ ಉಲ್ಲಂಘಿಸಿ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ, ಬೈಕ್ ಸವಾರರಿಗೆ ಪಟ್ಟಣದಲ್ಲಿ ಯಮ, ಚಿತ್ರಗುಪ್ತ ವೇಷಧಾರಿಗಳು ಜಾಗೃತಿ ಮೂಡಿಸಿದ್ದಾರೆ.
ಪಟ್ಟಣದಲ್ಲಿ ಶ್ರೀ ಕುಮಾರೇಶ್ವರ ಜೀವನ ವಿಕಾಸ ಫೌಂಡೇಶನ್, ಪೊಲೀಸ್ ಇಲಾಖೆ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕಲಾ ಸಿಂಚನ ಬಳಗದ ಕಲಾವಿದರ ತಂಡದಿಂದ ಕೊರೊನಾ ನಿಯಂತ್ರಣ ಕುರಿತ ಜನ ಜಾಗೃತಿ ಬೀದಿ ನಾಟಕದ ರೂಪಕ ನಡೆಸಲಾಯಿತು.
ಪಟ್ಟಣದ ಬನಶಂಕರಿ ದೇವಸ್ಥಾನದಿಂದ ಆರಂಭಗೊಂಡ ಮಾಸ್ಕ್ ಜಾಗೃತಿ ಅಭಿಯಾನ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಜೀವ ಉಳಿಸಿಕೊಳ್ಳಲು ಮಾಸ್ಕ್ ಹಾಕಿಕೊಂಡು, ಸಾಮಾಜಿಕ ಅಂತರ ಕಾಯ್ದುಕೊಂಡು ಕುಟುಂಬವನ್ನು, ಅಕ್ಕಪಕ್ಕದವರನ್ನು ಕಾಪಾಡುವಂತೆ ತಿಳಿಹೇಳಲಾಯಿತು.
ಕಲಾವಿದ ಗೋಪಾಲ ಹೂಗಾರ ಯಮರಾಜನ ವೇಷದಲ್ಲಿ ಸಾರ್ವಜನಿಕರಿಗೆ ತಿಳಿವಳಿಕೆ ಹೇಳಿದ್ದು, ಅಭಿಯಾನದ ನೇತೃತ್ವ ವಹಿಸಿದ್ದ ಕುಂಟೋಜಿ ಚೆನ್ನವೀರ ದೇವರು, ಜೀವ ಇದ್ದರೆ ಜೀವನ. ಹತ್ತು ರೂಪಾಯಿ ಮಾಸ್ಕ್ ಬೆಲೆ ಕಟ್ಟಲಾಗದ ಜೀವವನ್ನು ಉಳಿಸುತ್ತದೆ. ಯಾರೂ ಅಲಕ್ಷ್ಯ ಮಾಡದೆ ಮಾಸ್ಕ್ ಧರಿಸಿ ಜೀವಗಳನ್ನು ಉಳಿಸಿಕೊಳ್ಳಿ ಎಂದು ಮನವಿ ಮಾಡಿ, ಕೊರೊನಾ ಎರಡನೇ ಅಲೆಯ ರಣಕೇಕೆ ನಿಯಂತ್ರಿಸುವುದು ಹೇಗೆ? ಮಾಸ್ಕ್ ಧರಿಸುವ ಮಹತ್ವ ಮುಂತಾದವುಗಳ ಕುರಿತು ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
ಪೊಲೀಸರಿಂದಲೂ ಜಾಗೃತಿ: ಸಿಪಿಐ ಆನಂದ ವಾಘ್ಮೋಡೆ, ಪಿಎಸೈ ಎಂ.ಬಿ.ಬಿರಾದಾರ ನೇತೃತ್ವದಲ್ಲಿ ಪಟ್ಟಣದ ಪೊಲೀಸ್ ಠಾಣೆಯಿಂದಲೂ ಮಾಸ್ಕ್ ಜಾಗೃತಿ ಅಭಿಯಾನ ನಡೆಸಲಾಯಿತು.
ಓದಿ: ಕಾಳಸಂತೆಯಲ್ಲಿ ರೆಮ್ಡಿಸಿವಿರ್ ಮಾರಾಟಕ್ಕೆ ಸಿಎಂ ಗರಂ: ತನಿಖೆ ನಡೆಸಿ ಕ್ರಮದ ಎಚ್ಚರಿಕೆ