ಮುದ್ದೇಬಿಹಾಳ : ಪ್ರಸ್ತುತ ಕೋವಿಡ್-19 ಸಂದರ್ಭದಲ್ಲಿ ರಾಜ್ಯದ ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲೂಕಿನ ಐರಣಿ ಗ್ರಾಮದ ಜ್ಯೂ.ವಿಷ್ಣುವರ್ಧನ್ ಖ್ಯಾತಿಯ ಯುವ ಕಲಾವಿದ ಮಲ್ಲಯ್ಯ ಮಳಲಿಮಠ ಮುದ್ದೇಬಿಹಾಳ ತಾಲೂಕಿಗೆ ಆಗಮಿಸಿದ್ದಾರೆ.
ತಮ್ಮ ಖಾಸಗಿ ಬದುಕಿನ ಜೊತೆಗೆ ನಾಡದೇವಿ ಭುವನೇಶ್ವರಿಯ ಸೇವೆಯನ್ನು ಮಾಡುತ್ತಿರುವ ಅವರು ಸ್ಕೂಟಿಯನ್ನು ಕನ್ನಡದ ರಥವನ್ನಾಗಿ ರೂಪಾಂತರಿಸಿ ಜನತೆಯಲ್ಲಿ ಕೊರೊನಾ ಜಾಗೃತಿ, ಸಾರಿಗೆ ನಿಯಮಗಳ ಕುರಿತು ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಗಮಿಸಿದ್ದ ವೇಳೆ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ತಮ್ಮ ರಾಜ್ಯ ಪಯಣದ ಅನುಭವವನ್ನು ಹೇಳಿಕೊಂಡರು. ನವೆಂಬರ್ ತಿಂಗಳಲ್ಲಿ ಮಾತ್ರ ಕನ್ನಡ ಭಾಷೆಯ ಬಗ್ಗೆ ಅಭಿಮಾನ, ಹೋರಾಟ, ಭಾಷಾ ಪ್ರೇಮವನ್ನು ಹೊಂದದೆ, ವರ್ಷವೀಡಿ ಕನ್ನಡಮಾತೆಯ ಸೇವೆಯನ್ನು ಮಾಡುತ್ತಿದ್ದೇನೆ. ರಾಜ್ಯದ ದಕ್ಷಿಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಈಗಾಗಲೇ ಪ್ರವಾಸ ಮಾಡಿದ್ದು, ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಕನ್ನಡ ರಥದೊಂದಿಗೆ ಪಯಣ ಮುಂದುವರೆಸಿದ್ದೇನೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಕನ್ನಡ ಭಾಷೆಯನ್ನ ಅನಾದರದಿಂದ ಕಾಣುವ ಪ್ರವೃತ್ತಿ ಕಂಡಾಗ ಬೇಸರ ಎನಿಸುತ್ತದೆ. ನಾವು ಕನ್ನಡಿಗರು ರಾಜ್ಯದಲ್ಲಿ ಕನ್ನಡಿಗರೇ ಸಾರ್ವಭೌಮರಾಗಿರಬೇಕು ಎಂದು ಹೇಳಿದರು.
ತಮ್ಮ ಕನ್ನಡದ ರಥವನ್ನು ಕನ್ನಡದ ಬಾವುಟಗಳಿಂದ ಶೃಂಗರಿಸಿದ್ದು, ಸಾಹಸ ಸಿಂಹ ದಿ.ವಿಷ್ಣುವರ್ಧನ್ ಅವರ ಭಾವಚಿತ್ರಗಳನ್ನು ಅಳವಡಿಸಿದ್ದಾರೆ. ಇನ್ನುಳಿದಂತೆ ಕನ್ನಡ ಭಾಷೆಯಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳು, ಕನ್ನಡ ಭಾಷೆಯ ಅಭಿಮಾನವುಳ್ಳ ನುಡಿಮುತ್ತುಗಳನ್ನು ಹಾಕಿದ್ದಾರೆ. ವಿಶೇಷ ಎಂದರೆ ಕನ್ನಡದಲ್ಲಿಯೇ ಅವರ ದೂರವಾಣಿ ಸಂಖ್ಯೆಯನ್ನು ಹಾಕಿದ್ದು, ವಿಷ್ಣುವರ್ಧನ್ ಭಾವಚಿತ್ರಕ್ಕೆ ಮಾಸ್ಕ್ ಹಾಕಿ ಕೊರೊನಾ ಜಾಗೃತಿ ಮೂಡಿಸುತ್ತಿದ್ದಾರೆ. ತಾಲೂಕಿನ ಕೋಳೂರ ಗ್ರಾಮದಿಂದ ಆಗಮಿಸಿದ್ದ ಯುವಕರು ಕಲಾವಿದ ಮಲ್ಲಯ್ಯ ಮಳಲಿಮಠ ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಪುರಸಭೆ ಮಾಜಿ ಸದಸ್ಯ ಕಾಮರಾಜ ಬಿರಾದಾರ, ಹುಸೇನ್ ಮುಲ್ಲಾ, ಕಲಾವಿದ ಮುನೀರ್ ಅವಟಗೇರ, ಮಹಾಂತಗೌಡ ಕಾಶಿನಕುಂಟಿ ಮೊದಲಾದವರು ಇದ್ದರು.