ವಿಜಯಪುರ: ಬಿಜೆಪಿ ಸರ್ಕಾರ ದೇಶದ ನಾಗರಿಕರಲ್ಲಿ ಕೋಮು ಗಲಭೆ ಸೃಷ್ಟಿಸಿ ಆತಂಕ ಮೂಡಿಸುತ್ತಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಸಂಘಟನೆಗೊಂಡ ಕಾರ್ಯಕರ್ತರು, ಬಿಜೆಪಿ ಸರ್ಕಾರ, ಅಮಿತ್ ಶಾ, ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಜನ ವಿರೋಧಿ ನೀತಿಗಳನ್ನ ಜಾರಿಗೆ ತಂದು ದೇಶವಾಸಿಗಳ ಭಾವನೆಗಳಿಗೆ ಧಕ್ಕೆಯುಂಟು ಮಾಡುತ್ತಿದೆ. ದೆಹಲಿಯಲ್ಲಿ ಹಿಂಸಾಚಾರ ನಡೆಯುತ್ತಿದ್ದು, ಅನೇಕ ಸಾವು ನೋವುಗಳು ಸಂಭವಿಸಿ ಹಲವು ಜನ ಪ್ರಾಣ ಕಳೆದುಕೊಳ್ಳುವಂತಾಗಿದೆ. ವೃದ್ಧೆಯನ್ನು ಜೀವಂತವಾಗಿ ಸುಟ್ಟು ಹಾಕಲಾಗಿದೆ ಎಂದು ಕಿಡಿಕಾರಿದರು.
ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಯುವ ಸಮಿತಿ ಕಾರ್ಯಕರ್ತರು ಒತ್ತಾಯಿಸಿದರು. ಇನ್ನು ಅಮಿತ್ ಶಾ ಭಾವಚಿತ್ರ ದಹನ ಮಾಡಿದ ವಿಚಾರವಾಗಿ ಕೆಲಕಾಲ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು.