ವಿಜಯಪುರ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಪಕ್ಷ ತೊರೆದಿರುವುದು ವಿಧಾನಸಭೆ ಚುನಾವಣೆಯಲ್ಲಿ ಸ್ವಲ್ಪ ಮಟ್ಟಿಗೆ ಉತ್ತರ ಕರ್ನಾಟಕದಲ್ಲಿ ಪರಿಣಾಮ ಬೀರಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು. ವಿಜಯಪುರದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ಜನರು ಕಾಂಗ್ರೆಸ್‌ಗೆ ಮತ ಹಾಕಿದ್ದು ಅವರ ಪ್ರಣಾಳಿಕೆಯ ಗ್ಯಾರಂಟಿ ಕಾರ್ಡ್‌ಗಳಿಗಾಗಿ. ಈಗ ರಾಜ್ಯ ಸರ್ಕಾರದ ಮೇಲೆ ಗ್ಯಾರಂಟಿ ಕಾರ್ಡ್ ಜವಾಬ್ದಾರಿ ಇದೆ. ಕಾಂಗ್ರೆಸ್ನವರು ದೇಶವನ್ನೂ ಮಾರ್ಕೊಂಡು ಹೊರಟಾರ. ಮೋದಿ ಇದ್ದಾರೆ ಎನ್ನುವ ಕಾರಣದಿಂದ ದೇಶವನ್ನು ಅವರು ಸರಿಯಾಗಿ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ ಎಂದು ತಿಳಿಸಿದರು.
ಕೇಂದ್ರದಲ್ಲಿ ಮತ್ತೆ ಬಿಜೆಪಿಗೇ ಅಧಿಕಾರ: ಯಾರೇ ಲೀಡರ್‌ಗಳು ಬರಲಿ, ಯಾವ ಪಕ್ಷದವರೇ ಇರಲಿ. ಮೋದಿಯನ್ನು ಈ ಬಾರಿಯೂ ಸೋಲಿಸಲು ಸಾಧ್ಯವಿಲ್ಲ. ಖಂಡಿತ ಮತ್ತೊಮ್ಮೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಬರಲಿದೆ. ಮತ್ತೆ ಮೋದಿ ಪ್ರಧಾನಮಂತ್ರಿ ಆಗಲಿದ್ದಾರೆ ಎಂಬ ನೂರಕ್ಕೆ ನೂರು ಗ್ಯಾರಂಟಿ ನಮಗಿದೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ಲೋಕಸಭೆ ಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಅವರು ಹೇಳಿದರು.
ಇದನ್ನೂಓದಿ: Legislative council Election : ವಿಧಾನಪರಿಷತ್ ಚುನಾವಣೆ .. ನಾಮಪತ್ರ ಸಲ್ಲಿಕೆ ಆರಂಭ
ಈ ಹಿಂದೆಯೂ ನಮ್ಮನ್ನು ಸೋಲಿಸಲು ಸಾಕಷ್ಟು ಪ್ರಯತ್ನ ಮಾಡಿದ್ದರು. ಆದರೆ ಕರ್ನಾಟಕದಲ್ಲಿ 25 ಸ್ಥಾನ ಗಳಿಸಿದ್ದೆವು. ಕಾಂಗ್ರೆಸ್‌ನವರ ಗ್ಯಾರಂಟಿಗಳ ಕಾರಣದಿಂದಾಗಿ ಜನರು ಮತ ಹಾಕಿದ್ದಾರೆ. ಹೀಗಾಗಿ ಸುಮ್ಮನಾಗಿದ್ದೇವೆ. ಅವರ ಪಕ್ಷದಲ್ಲಿಯೇ ನಾಯಕತ್ವದ ಕೊರತೆ ಇದೆ. ಇದು ನಮಗೆ ವರದಾನವಾಗಲಿದೆ ಎಂದು ತಿಳಿಸಿದರು.
ದಲಿತ ಸಿಎಂ ಗ್ಯಾರಂಟಿ: ದಲಿತ ಸಿಎಂ ವಿಚಾರವಾಗಿ ಮಾತನಾಡುತ್ತಾ, ಮಲ್ಲಿಕಾರ್ಜನ ಖರ್ಗೆ ಇದ್ದಾರಲ್ಲ ಎಂಬ ಪ್ರಶ್ನೆಗೆ, ಅದನ್ನು ನಾವು ಒಪ್ಪಿಕೊಳ್ಳುತ್ತೇವೆ. ಆದರೆ ಪ್ರಧಾನಿ ಹುದ್ದೆಗೆ ದಲಿತರನ್ನು ನೇಮಕ ಮಾಡುವಾಗ ನಡೆದ ಪ್ರಸಂಗವೂ ಗೊತ್ತಿದೆ. ಈಗ ನಾವು ಬಹಳ ಮಾತನಾಡುವುದಿಲ್ಲ. ರಾಜ್ಯದಲ್ಲಿಯೂ ದಲಿತ ಸಿಎಂ ವಿಚಾರವಾಗಿ ಒದಗಿ ಬಂದ ಸಂದರ್ಭಗಳು ಗೊತ್ತಿವೆ. ಮುಂದೊಂದು ದಿನ ನೂರಕ್ಕೆ ನೂರಷ್ಟು ದಲಿತ ಸಿಎಂ ಆಗುವುದು ಗ್ಯಾರಂಟಿ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ವಿರೋಧ ಪಕ್ಷದ ನಾಯಕ ಯಾರು?: ವಿರೋಧ ಪಕ್ಷದ ನಾಯಕರನ್ನು ನೇಮಕ ಮಾಡುವ ಕುರಿತು ಪ್ರತಿಕ್ರಿಯೆ ನೀಡಿದ ಜಿಗಜಿಣಗಿ, ಬಿಜೆಪಿಯಯೂ ಸಾಕಷ್ಟು ಜನ ಸಮರ್ಥರಿದ್ದಾರೆ. ವಿಪಕ್ಷ ನಾಯಕನನ್ನು ಆಯ್ಕೆ ಮಾಡುತ್ತೇವೆ. ಯಾರನ್ನು ಮಾಡುತ್ತಾರೆ ಎಂದು ನನ್ನನ್ನು ಕೇಳಬೇಡಿ, ನನಗೂ ಅದಕ್ಕೂ ಸಂಬಂಧವಿಲ್ಲ. ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನೇ ಮಾಡಲಿ, ಇಲ್ಲವೇ ಇನ್ನೊಬ್ಬರನ್ನು ಮಾಡಲಿ, ನನಗೆ ಯಾವುದೇ ಅಭ್ಯಂತರವಿಲ್ಲ ಎಂದು ಅಭಿಪ್ರಾಯ ತಿಳಿಸಿದರು.
ಇದನ್ನೂ ಓದಿ:Shakti Yojana: ಎರಡನೇ ದಿನವೂ ಶಕ್ತಿ ಬಸ್ ಫುಲ್ ರಶ್; 41.34 ಲಕ್ಷ ಮಹಿಳಾ ಪ್ರಯಾಣಿಕರಿಂದ ಉಚಿತ ಪ್ರಯಾಣ