ಮುದ್ದೇಬಿಹಾಳ : ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ನಡೆದಿರುವ ಸಿಸಿ ರಸ್ತೆ ಕಾಮಗಾರಿಗಳು ಬಿರುಕು ಬಿಟ್ಟಿದ್ದು ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರ್ಪಡೆ ಮಾಡಬೇಕೆಂದು ಆಗ್ರಹಿಸಿ ಪುರಸಭೆ ಸದಸ್ಯರು ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆ ಸದಸ್ಯ ಶಿವು ಚಲವಾದಿ (ಶಿವಪೂರ) ಹಾಗೂ ಮಾಜಿ ಸದಸ್ಯ ಕಾಮರಾಜ ಬಿರಾದಾರ, ಲೋಕೋಪಯೋಗಿ ಇಲಾಖೆಯಡಿ ಎಸ್‌ಸಿಪಿ ಟಿಎಸ್‌ಪಿ ಯೋಜನೆಯಲ್ಲಿ ಪಟ್ಟಣದಲ್ಲಿ ಅಂದಾಜು 3 ಕೋಟಿ ರೂ.ವೆಚ್ಚದಲ್ಲಿ ಕಳಪೆ ಸಿಸಿ ರಸ್ತೆಗಳನ್ನು ಗುತ್ತಿಗೆದಾರರು ಮಾಡುತ್ತಿದ್ದಾರೆ. ಪಟ್ಟಣದ ಗಣೇಶ ನಗರ, ಬಸವ ನಗರ, ಇಂದಿರಾ ನಗರ, ಪಿಲೆಕೆಮ್ಮ ನಗರ, ಮಹಾಂತೇಶ ನಗರದಲ್ಲಿ ಎಸ್‌ಸಿಪಿ, ಟಿಎಸ್‌ಪಿ ಕಾಮಗಾರಿಗಳನ್ನು ನಡೆಸುತ್ತಿದ್ದಾರೆ.
ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಷಾಮೀಲಾಗಿ ಸಾರ್ವಜನಿಕರ ಹಣ ಲಪಟಾಯಿಸಲು ಮುಂದಾಗಿದ್ದಾರೆ. ಕೂಡಲೇ ಕಳಪೆ ರಸ್ತೆ ನಿರ್ಮಿಸಿದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಸಂಬಂಧಿಸಿದ ಇಲಾಖೆಯ ಅಧಿಕಾರಿಯನ್ನು ಅಮಾನತುಗೊಳಿಸಬೇಕು. ವಾರದಲ್ಲಿ ಕ್ರಮ ಜರುಗಿಸದೇ ಇದ್ದಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತೇವೆ ಎಂದು ಹೇಳಿದರು.
ಅಲ್ಲದೆ ಇವರ ವಿರುದ್ದ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ ಜಿ.ಎಸ್.ಮಳಗಿ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಪುರಸಭೆ ಸದಸ್ಯ ಮಹಿಬೂಬ ಗೊಳಸಂಗಿ, ಮುಖಂಡರಾದ ಅನಿಲ್ ನಾಯಕ, ಸಮೀರ ದ್ರಾಕ್ಷಿ ಮೊದಲಾದವರು ಇದ್ದರು.