ವಿಜಯಪುರ: ಈ ಬಾರಿ ರಾಜ್ಯದಲ್ಲಿ ಮಳೆ ವಾಡಿಕೆಗಿಂತ ಕಡಿಮೆಯಾಗಿದೆ. ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ಬರ ಕುರಿತು ಈಗಾಗಲೇ ಚರ್ಚೆ ನಡೆಸಿ, ಜಂಟಿ ಸರ್ವೆ ಸಹ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿಯ ಕೃಷ್ಣಾ ನದಿಗೆ ನಿರ್ಮಿಸಲಾದ ಜಲಾಶಯಕ್ಕೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೊಂದಿಗೆ ಜಂಟಿಯಾಗಿ ಶನಿವಾರ ಗಂಗಾ ಪೂಜೆ ಮತ್ತು ಬಾಗಿನ ಅರ್ಪಿಸಿ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಸುಮಾರು 113ಕ್ಕೂ ಹೆಚ್ಚು ತಾಲೂಕಗಳಲ್ಲಿ ಬರ ಆವರಿಸಿದೆ. ಇದಕ್ಕೆ ಮತ್ತೆ 73 ತಾಲೂಕು ಸೇರ್ಪಡೆಯಾಗಬಹುದು. ಸೆಪ್ಟಂಬರ್ 4 ರಂದು ಈ ಬಗ್ಗೆ ಸಭೆ ನಡೆಸಲಾಗುವುದು. ಸಭೆಯಲ್ಲಿ ಎಷ್ಟು ತಾಲೂಕು ಬರ ಎಂದು ಘೋಷಣೆ ಮಾಡಲಾಗುತ್ತದೆ. ಬರ ವಿಚಾರದಲ್ಲಿ ಕೇಂದ್ರಕ್ಕೂ ಮನವಿ ಸಲ್ಲಿಸಲಾಗುವುದು. ಎನ್ಡಿಆರ್ಎಫ್ ನಿಯಮದ ಪ್ರಕಾರ ಬರ ಪರಿಹಾರ ಸಿಗಲಿದೆ. ನಿಯಮ ಬದಲಾವಣೆ ಬಗ್ಗೆ ಈಗಾಗಲೇ ಪತ್ರ ಬರೆಯಲಾಗಿದೆ ಎಂದು ಅವರು ಹೇಳಿದರು.
ಉತ್ತರ ಕರ್ನಾಟಕದ ಜೀವ ನದಿ ಎಂದೆ ಕರೆಸಿಕೊಳ್ಳುವ ಕೃಷ್ಣಾ ನದಿಯು, ಉತ್ತರ ಕರ್ನಾಟಕದ ಜನರ ಜೀವನವನ್ನು ಸಮೃದ್ಧಿಗೊಳಿಸಲಿ ಎಂದು ಹಾರೈಸಿದ ಸಿಎಂ, ನೀರಾವರಿಗಾಗಿ ಬಜೆಟ್‌ನಲ್ಲಿ 21000 ಕೋಟಿ ಮೀಸಲು ಇಡಲಾಗಿದೆ. ಭದ್ರಾ ಯೋಜನೆಗೆ 5300 ಕೋಟಿ ಕೇಂದ್ರದಿಂದ ಬರಬೇಕು. ಆದರೆ, ಕೇಂದ್ರ ಈವರೆಗೂ ಹಣ ನೀಡಿಲ್ಲ. ಹಾಗಾಗಿ, ಕೆಲವು ಕಾರಣಗಳಿಂದ 3ನೇ ಹಂತದ ಯೋಜನೆಗೆ ಅಡ್ಡಿಯಾಗಿದೆ ಎಂದರು.
ಇನ್ನು ಕಾವೇರಿ ನದಿ ನೀರು ಬಿಡುಗಡೆ ವಿಚಾರವಾಗಿ ಮಾತನಾಡಿ, 5000 ಕ್ಯೂಸೆಕ್ ನೀರು ಬಿಡಲು ಆದೇಶ ಆಗಿದೆ. ತಮಿಳುನಾಡಿ 24000 ಕ್ಯೂಸೆಕ್ ಬಿಡಲು ಒತ್ತಾಯಿಸಿತ್ತು ಎಂದು ಅವರು ಹೇಳಿದರು.
ಪ್ರತ್ಯೇಕ ರಾಜ್ಯ ಘೋಷಣೆ: ಕೃಷ್ಣೆ ವಿಚಾರದಲ್ಲಿ ತಾರತಮ್ಯ, ಪ್ರತ್ಯೇಕ ಉತ್ತರ ಕರ್ನಾಟಕ ಕೂಗು ವಿಚಾರವಾಗಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೃಷ್ಣಾ ಮತ್ತು ಕಾವೇರಿ ಅಂತ ಬೇರೆ ಬೇರೆ ಇಲ್ಲ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಪ್ರಶ್ನೆ ಇಲ್ಲ, ಇವೆಲ್ಲವೂ ಜೀವನದಿಗಳಾಗಿವೆ. ಕರ್ನಾಟಕದಲ್ಲಿರುವವರು ಎಲ್ಲರೂ ರೈತರು. ಕಾವೇರಿ ರೈತರು, ಕೃಷ್ಣಾ ಬೇಸ್ ರೈತರು ಎಲ್ಲರೂ ನಮ್ಮ ರೈತರೆ. ಇಲ್ಲಿ ತಾರತಮ್ಯ ಎನ್ನುವ ವಿಚಾರವೇ ಇಲ್ಲ. ನಮ್ಮದು ಅಖಂಡ ಕರ್ನಾಟಕ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಸೇರಿದಂತೆ, ಆರ್.ಬಿ. ತಿಮ್ಮಾಪೂರ, ಶಿವಾನಂದ ಪಾಟೀಲ, ನವದೆಹಲಿಯಲ್ಲಿನ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ-2 ಪ್ರಕಾಶ ಹುಕ್ಕೇರಿ ಸೇರಿದಂತೆ ವಿಜಯಪುರ ಹಾಗೂ ಬಾಗಲಕೋಟ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.
ಇದನ್ನೂ ಓದಿ: Cauvery water issue: ಕಾವೇರಿ ನೀರು ಹಂಚಿಕೆ ವಿವಾದ.. ಕೇಂದ್ರ ಸರ್ಕಾರ ಮಧ್ಯೆ ಪ್ರವೇಶಿಸುವಂತೆ ಸಿಎಂ ಸಿದ್ದರಾಮಯ್ಯ ಒತ್ತಾಯ