ವಿಜಯಪುರ: 'ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೃಷ್ಣ ಮೇಲ್ದಂಡೆ ಯೋಜನೆಗೆ ಪ್ರತಿ ವರ್ಷ 10 ಸಾವಿರ ಕೋಟಿ ನೀಡುವುದಾಗಿ ಪ್ರತಿಜ್ಞೆ ಮಾಡಿದ್ದರು. ಆದರೆ ಅಧಿಕಾರಕ್ಕೆ ಬಂದ ಮೇಲೆ ಐದು ವರ್ಷ ಆಡಳಿತ ನಡೆಸಿದರೂ ಕೂಡ 10 ಸಾವಿರ ಕೋಟಿ ರೂ ನೀಡಲಾಗಲಿಲ್ಲ. ಸಿದ್ದರಾಮಯ್ಯ ವಚನಭ್ರಷ್ಟರಾದರು' ಎಂದು ಸಿಎಂ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು.
'ವಿಚಿತ್ರವೆಂದರೆ, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಯಾರು ಎನ್ನುವುದು ಅವರ ಪಕ್ಷದವರಿಗೇ ಗೊತ್ತಿಲ್ಲ. ನಮ್ಮ ಸರ್ಕಾರ ಎಲ್ಲಾ ವರ್ಗದವರನ್ನು ದೃಷ್ಟಿಯಲ್ಲಿಟ್ಟುಕೊಂಡು ಯೋಜನೆ ರೂಪಿಸುತ್ತಿದೆ' ಎಂದರು.
ಆರ್ ಎಸ್ ಎಸ್ ಪರ ಬ್ಯಾಟಿಂಗ್:
'ಸಿದ್ದರಾಮಯ್ಯ ಜನತಾದಳದಲ್ಲಿದ್ದಾಗ ಚನ್ನಾಗಿದ್ದರು. ಕಾಂಗ್ರೆಸ್ ಸೇರಿದ ನಂತರ ಹಾದಿ ತಪ್ಪಿದ್ದಾರೆ. ನಾನು ಆರ್‌ಎಸ್‌ಎಸ್‌ನಿಂದ ಬಂದಿಲ್ಲ ಎನ್ನುತ್ತಿದ್ದಾರೆ. ಆದರೆ ಅವರು ಆರ್ಎಸ್ಎಸ್ನಲ್ಲಿ ಇಲ್ಲ ಅಂದ್ರೆ ಅದರ ಬಗ್ಗೆ ಮಾತನಾಡಬಾರದು. ಕೇವಲ ಟೀಕೆಗಾಗಿ ಆರ್ಎಸ್ಎಸ್ ಅನ್ನು ಬಳಸುತ್ತಿದ್ದಾರೆ. ಆರ್ಎಸ್ಎಸ್ ಸೇರಿದವರು ದೇಶಭಕ್ತರು' ಎಂದರು.
ಇದಕ್ಕೂ ಮೊದಲು ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಿಎಂ ಸಿದ್ದ ರಾಮಯ್ಯ ವಿರುದ್ಧ ಹರಿಹಾಯ್ದರು. 'ಇಂದು ಸಿದ್ದರಾಮಯ್ಯ ಕೇವಲ ಅಲ್ಪಸಂಖ್ಯಾತ ಮತಗಳನ್ನು ಕೇಳುತ್ತಿದ್ದಾರೆ. ಆದರೆ ಸಿಎಂ ಬೊಮ್ಮಾಯಿ ಎಲ್ಲಾ ಸಮುದಾಯದ ಮತ ಕೇಳುತ್ತಿದ್ದಾರೆ. ಈ ಚುನಾವಣೆ ನಂತರ ಕಾಂಗ್ರೆಸ್ ಎರಡು ಭಾಗವಾಗುತ್ತದೆ. ಮತ್ತೆ ರಾಜ್ಯದಲ್ಲಿ ಬಿಜೆಪಿ 150 ಸೀಟ್ ಪಡೆದುಕೊಂಡು ಅಧಿಕಾರಕ್ಕೆ ಬರುತ್ತದೆ' ಎಂದು ಭವಿಷ್ಯ ನುಡಿದರು.
ಜೆಡಿಎಸ್ ಬಗ್ಗೆ ಬಿಜೆಪಿ ಮೌನ:
ಇದೇ ವೇಳೆ ಆಲಮೇಲ ಚುನಾವಣಾ ಪ್ರಚಾರದಲ್ಲಿ ಸಿಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರು ಜೆಡಿಎಸ್ ವಿರುದ್ಧ ಯಾವುದೇ ಆರೋಪ ಮಾಡದಿರುವುದು ಕಂಡುಬಂತು. ಕಾಟಾಚಾರಕ್ಕೆ ಜೆಡಿಎಸ್ ನಾಯಕರನ್ನು ತೆಗಳಿದರೇ ಹೊರತು ಯಾವುದೇ ಗಂಭೀರ ಆರೋಪ ಮಾಡಲಿಲ್ಲ.