ವಿಜಯಪುರ: ಸೌದಿ ಅರೇಬಿಯಾದಿಂದ ಬಂದ ದಂಪತಿಗೆ ಕೊರೊನಾ ಶಂಕೆ ವಿಚಾರವಾಗಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.
ದಂಪತಿಗೆ ಕೆಮ್ಮು, ಶೀತ ಕಾಣಿಸಿಕೊಂಡ ಪರಿಣಾಮ ಜಿಲ್ಲಾಸ್ಪತ್ರೆಯಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಸದ್ಯ ಐಸೋಲೇಷನ್ ನಡೆಸಲಾಗುತ್ತಿದ್ದು, ಗಂಟಲು ಮಾದರಿ ವರದಿ ಬಂದ ಬಳಿಕ ಹೆಚ್ಚಿನ ಮಾಹಿತಿ ಸಿಗಲಿದೆ. ವರದಿ ಬರುವವರೆಗೂ ಅವರನ್ನು ಪ್ರತ್ಯೇಕವಾಗಿ ಇರಿಸಲಾಗುತ್ತದೆ ಎಂದು ಡಿಸಿ ಹೇಳಿದ್ದಾರೆ.
ದಂಪತಿ ವಿಜಯಪುರದ ಸಂಬಂಧಿಕರ ಮನೆಗೆ ಭೇಟಿ ನೀಡಿದ್ದಾರೆ. ಅವರು ಭೇಟಿ ನೀಡಿದ ಮನೆಗಳ ಸಂಬಂಧಿಕರನ್ನೂ ತಪಾಸಣೆಗೆ ಒಳಪಡಿಸಲಾಗುವುದು. ಮುದ್ದೇಬಿಹಾಳದ ವೃದ್ಧ ದಂಪತಿ ಜೊತೆಗಿದ್ದ ಮಗುವನ್ನೂ ತಪಾಸಣೆ ಮಾಡಲಾಗಿದೆ. ಆ ಮಗು ಇವರೊಂದಿಗೆ ಕೆಲ ಕಾಲ ಕಳೆದಿತ್ತು. ಸೌದಿಯಿಂದ ವಿಮಾನದ ಮೂಲಕ ಮುಂಬೈಗೆ ಬಂದು ಅಲ್ಲಿಂದ ವಿಜಯಪುರಕ್ಕೆ ರೈಲಿನ ಮೂಲಕ ದಂಪತಿ ಆಗಮಿಸಿದ್ದಾರೆ. ವಿಜಯಪುರದಲ್ಲಿ ಸಂಬಂಧಿಕರ ಮನೆಗೆ ಬಂದು ಬಳಿಕ ತಮ್ಮ ಹಳ್ಳಿಗೆ ಹೋಗಿರುವ ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದರು.
ಬೆಲ್ಜಿಯಂನಿಂದ ಬಂದಿದ್ದ ತಾಯಿ-ಮಗುವಿಗೆ ಕೊರೊನಾ ಶಂಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಅವರ ಗಂಟಲು ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇಂದು ಮಧ್ಯಾಹ್ನದ ವೇಳೆಗೆ ಆ ವರದಿ ಬರಲಿದೆ. ವರದಿ ಬಂದ ಬಳಿಕ ಸ್ಪಷ್ಟ ಮಾಹಿತಿ ಸಿಗಲಿದೆ ಎಂದರು.
ಕಲಬುರಗಿಯಲ್ಲಿ ಕೊರೊನಾದಿಂದ ಮೃತಪಟ್ಟ ವೃದ್ಧ ವಿದೇಶದಿಂದ ಬಂದಾಗ ವಿಜಯಪುರಕ್ಕೆ ಭೇಟಿ ನೀಡಿದ್ದರು ಎಂಬ ವದಂತಿ ವಿಚಾರವಾಗಿ ಮಾತನಾಡಿದ ಅವರು, ಅದು ಖಚಿತವಾಗಿಲ್ಲ. ತಾಳಿಕೋಟೆ ಭಾಗದಲ್ಲಿ ವದಂತಿ ಹರಡಿದೆ. ವಿದೇಶದಿಂದ ಯಾರೇ ಬಂದರೂ ಅವರನ್ನು ತಪಾಸಣೆ ನಡೆಸಲಾಗುತ್ತಿದೆ. ಲಕ್ಷಣಗಳು ಕಂಡುಬಂದಲ್ಲಿ ಅವರಿಗೆ ಪ್ರತ್ಯೇಕವಾಗಿ ಇರಿಸಿ ತಪಾಸಣೆ ಮಾಡಲಾಗುವುದು ಎಂದರು.