ವಿಜಯಪುರ: ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಿದ್ದಂತೆ ಅದನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಸಹ ಹೆಚ್ಚಾಗಿದೆ. ಆನ್ಲೈನ್ ಮೂಲಕ ಕ್ರೆಡಿಟ್ ಕಾರ್ಡ್ ವಂಚನೆ ಪ್ರಕರಣಗಳು ಇದಕ್ಕೆ ತಾಜಾ ಉದಾಹರಣೆಯಾಗಿವೆ.
ಪೆಟ್ರೋಲ್ ಬಂಕ್ನಲ್ಲಿ ಪೆಟ್ರೋಲ್ ಹಾಕುವ ಯಂತ್ರಗಳನ್ನು ದುರ್ಬಳಕೆ ಮಾಡಿಕೊಂಡು ವಂಚನೆ ಮಾಡಲಾಗುತ್ತಿದೆ. ಪ್ರತಿ ಲೀಟರ್ನಲ್ಲಿ ಜಂಪ್ ಮಾಡಿ ಮೊದಲು ವಾಹನ ಸವಾರರಿಗೆ ವಂಚನೆ ಮಾಡಲಾಗುತಿತ್ತು. ಈಗ ಪೆಟ್ರೋಲ್ ಯಂತ್ರಕ್ಕೆ ಚಿಪ್ ಅಳವಡಿಸಿ 1000 ರೂ. ಪೆಟ್ರೋಲ್ ಹಾಕಿದರೆ 900 ರೂ. ಪೆಟ್ರೋಲ್ ನಿಮ್ಮ ವಾಹನಕ್ಕೆ ಸರಬರಾಜು ಆಗುತ್ತದೆ. ಹೀಗೆ ನಿತ್ಯ ಲಕ್ಷಾಂತರ ರೂ. ವಂಚನೆ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಇತ್ತೀಚಿಗೆ ಆಂಧ್ರ ಹಾಗೂ ಉತ್ತರ ಪ್ರದೇಶದಲ್ಲಿ ಪೊಲೀಸರು ಭೇದಿಸಿದ ಪ್ರಕರಣದಿಂದ ಚಿಪ್ ಮೋಸದಾಟ ಬೆಳಕಿಗೆ ಬಂದಿದೆ. ಕರ್ನಾಟಕದಲ್ಲಿ ಸದ್ಯ ಇಂತಹ ಯಾವುದೇ ಪ್ರಕರಣ ದಾಖಲಾಗಿಲ್ಲ. ಮುನ್ನೆಚ್ಚರಿಕೆಯಾಗಿ ಕರ್ನಾಟಕ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ತಮ್ಮ ಎಲ್ಲ ಡೀಲರ್ಸ್ಗಳಿಗೆ ಸೂಚನೆ ನೀಡಿದ್ದು, ಅವ್ಯವಹಾರ ಕಂಡು ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಲು ಸೂಚಿಸಿದೆ.
ವಿಜಯಪುರ ಜಿಲ್ಲೆಯಲ್ಲಿ ಒಟ್ಟು 165 ಪೆಟ್ರೋಲ್ ಬಂಕ್ಗಳು ಇವೆ. ಇಲ್ಲಿಯವರೆಗೆ ಯಾವುದೇ ಈ ತರಹದ ಪ್ರಕರಣ ದಾಖಲಾಗಿಲ್ಲ. ಗ್ರಾಹಕರು ಪೆಟ್ರೋಲಿಯಂ ಸಂಬಂಧಿತ ದೂರು ನೀಡಲು ಇಲಾಖೆಯ 08352-250829, ಮೊ.9481633311 ನಂಬರ್ ಗೆ ಅವಕಾಶವಿದೆ. ಇ-ಮೇಲ್ ಮೂಲಕ ಸಹ ದೂರು ನೀಡಬಹುದಾಗಿದೆ.