ವಿಜಯಪುರ: ಸಮಾಜದಲ್ಲಿ ಬೇರೂರಿರುವ ಮೂಢನಂಬಿಕೆ, ಕಂದಾಚಾರ ಹೋಗಲಾಡಿಸಲು ಭಯ ಮುಕ್ತ ಮತ್ತು ಮೌಢ್ಯ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಸ್ಮಶಾನದಲ್ಲಿ ವಾಸ್ತವ್ಯ ಹೂಡುವುದಾಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. 14ರಂದು ಸಂಜೆ 6 ಗಂಟೆಗೆ ವಿಜಯಪುರ ತಾಲೂಕಿನ ಜುಮನಾಳ ಗ್ರಾಮದ ಸ್ಮಶಾನದಲ್ಲಿ ವಾಸ್ತವ್ಯ ಮಾಡುವುದಾಗಿ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಸತೀಶ್ ಜಾರಕೊಹೊಳಿ, ಪವಾಡ ಬಯಲು ಪ್ರವೀಣ ಹುಲಿಕಲ್ ನಟರಾಜ್ ಹಾಗೂ ಅನೇಕ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲೆಯ ಮಾಜಿ ಸಚಿವರುಗಳು, ಹಾಲಿ ಶಾಸಕರು ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮದ ಮೂಲ ಉದ್ದೇಶ ಭವಿಷ್ಯ ಹೇಳುವುದು, ವಾಮಾಚಾರ, ಮಾಟ ಮಂತ್ರ, ಡೋಂಗಿ ಪವಾಡಗಳು ಇಂದು ಜಗತ್ತನ್ನು ಆಳುತ್ತಿವೆ, ಮುಗ್ಧ ಮನಸುಗಳನ್ನು ಹಾಳು ಮಾಡುತ್ತಿವೆ. ಈ ಕಾರಣಕ್ಕಾಗಿ ಭಯ ಮುಕ್ತ ಹಾಗೂ ಮೂಢನಂಬಿಕೆಗಳಿಂದ ದೂರವಿದ್ದು, ವಿಜ್ಞಾನ ಹೇಳುವುದನ್ನು ಮಾತ್ರ ನಂಬಿ ನೆಮ್ಮದಿಯ ಜೀವನ ನಡೆಸಲಿ ಎಂಬ ಸದುದ್ದೇಶದಿಂದ ಸ್ಥಶಾನದಲ್ಲಿ ವಾಸ ಮಾಡಲಿದ್ದೇನೆ ಎಂದು ತಿಳಿಸಿದರು.
ಈ ವಾಸ್ತವ್ಯ ಕಾರ್ಯಕ್ರಮ ಶಾಸಕ ಸತೀಶ್ ಜಾರಕೊಹೊಳಿ ನೇತೃತ್ವದ ಮಾನವ ಬಂಧುತ್ವ ವೇದಿಕೆಯಿಂದ ಹಮ್ಮಿಕೊಳ್ಳಲಾಗಿದೆ. ತಮ್ಮ ತಂದೆ ಕೂಡ ಮೌಢ್ಯತೆ ಧಿಕ್ಕರಿಸಿ ತಮ್ಮ ದೇಹವನ್ನು ಆಸ್ಪತ್ರೆಗೆ ದಾನ ಮಾಡುವ ಮೂಲಕ ಮೂಢನಂಬಿಕೆಯಿಂದ ದೂರವಿರುವಂತೆ ಸಂದೇಶ ಸಾರಿದ್ದಾರೆ. ಅವರ ಪ್ರೇರಣೆಯಿಂದ ನಾನು ಸಹ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ. ಈಗಾಗಲೇ ಹತ್ತು ಹಲವು ಕಡೆ ಗ್ರಾಮ ವಾಸ್ತವ್ಯ ಮಾಡಿ ಜನರ ಕಷ್ಟ ಪರಿಹರಿಸಲು ಪ್ರಯತ್ನಿಸಿದ್ದೇನೆ ಎಂದು ತಿಳಿಸಿದರು.
ಮಾನವ ಬಂಧುತ್ವ ವೇದಿಕೆಯ ವಿಜಯಪುರ ಸಂಚಾಲಕ ಪ್ರಭುಗೌಡ ಪಾಟೀಲ, ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ ಉಪಸ್ಥಿತರಿದ್ದರು.