ವಿಜಯಪುರ : ಜಿಲ್ಲೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಕೇಂದ್ರ ಸಿಬಿಐ ತಂಡ ನಗರದ ಭಾರತ ಸಂಚಾರ ನಿಗಮದ ಕಚೇರಿ ಮೇಲೆ ದಾಳಿ ನಡೆಸುವ ಮೂಲಕ ಬಿಎಸ್ಎನ್ಎಲ್ ಸಿಬ್ಬಂದಿಯ ಬೆವರಿಳಿಸಿದೆ.
ಗ್ರಾಮ ಪಂಚಾಯತ್‌ಗಳಿಗೆ ಸ್ಪೀಡ್ ಇಂಟರ್ನೆಟ್ ಪೂರೈಸುವ ಫೈಬರ್ ಕೇಬಲ ಸರಬರಾಜಿನಲ್ಲಿ ಅವ್ಯವಹಾರ ನಡೆದಿರುವ ಆರೋಪ ಹಿನ್ನೆಲೆ ಈ ದಾಳಿ ನಡೆಸಲಾಗಿದೆ ಎನ್ನಲಾಗಿದೆ. ಇದರ ಜತೆಗೆ ಹಲವು ಇಲಾಖೆಯ ವ್ಯವಹಾರಗಳ ಮೇಲಿನ ದಾಖಲೆಗಳನ್ನು ಸಹ ಪರಿಶೀಲಿಸಲಾಗಿದೆ.
ನಗರದ ಬಸವೇಶ್ವರ ವೃತ್ತದ ಬಳಿ ಇರುವ ಬಿಎಸ್ಎನ್ಎಲ್ ಕಚೇರಿ ಮೇಲೆ ಶುಕ್ರವಾರ ಸಂಜೆ ಸಿಬಿಐನ ಮಹಿಳಾ ಅಧಿಕಾರಿ ಸೇರಿ ಐವರ ತಂಡ ಏಕಾಏಕಿ ದಾಳಿ ನಡೆಸಿತ್ತು. ಈ ವೇಳೆ ಬಹುತೇಕ ಇಲಾಖೆ ಸಿಬ್ಬಂದಿ ಕರ್ತವ್ಯ ನಿರ್ವಹಿಸಿ ಮನೆಗೆ ವಾಪಸ್ ಆಗಿದ್ದರು. ಇಲಾಖೆಯ ಜನರಲ್ ಮ್ಯಾನೇಜರ್ ಹಾಗೂ ಸಹಾಯಕ ಮ್ಯಾನೇಜರ್ ಅವರ ಕೋಣೆಗೆ ತೆರಳಿ ಕಚೇರಿ ಬಾಗಿಲು ಮುಚ್ಚಿ, ದಾಖಲೆಗಳನ್ನು ಪರಿಶೀಲಿಸಿದ್ದಾರೆ.
ಕೇಂದ್ರ ಸರ್ಕಾರದ ಡಿಜಿಟೆಲ್ ಇಂಡಿಯಾ ಯೋಜನೆಯಡಿ ಜಿಲ್ಲೆಯ 211 ಗ್ರಾಮ ಪಂಚಾಯತ್‌ಗಳ ಇಂಟರ್ನೆಟ್ ಸೌಲಭ್ಯದ ಫೈಬರ್ ಕೇಬಲ್ ಅಳವಡಿಕೆ ವಿಚಾರದಲ್ಲಿ ಅಕ್ರಮ ನಡೆದಿದೆ ಅನ್ನೋ ಆರೋಪಗಳು ಕೇಳಿ ಬಂದ ಕಾರಣ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ.
ಕೆಲ ಗ್ರಾಪಂಗೆ ಫೈಬರ್ ಕೇಬಲ್ ಅಳವಡಿಸಿ, ಎಲ್ಲ ಗ್ರಾಪಂಗಳಿಗೆ ಕೇಬಲ್ ಅಳವಡಿಸಲಾಗಿದೆ ಎಂದು ಅನುದಾನ ಬಿಡುಗಡೆ ಮಾಡಿಸಲಾಗಿದೆ. ಅವ್ಯವಹಾರ ನಡೆದಿರುವ ಶಂಕೆ ಹಿನ್ನೆಲೆ ಸಿಬಿಐ ದಾಳಿ ನಡೆಸಿದೆ. ಇಂದು ಶನಿವಾರ. ಹೀಗಾಗಿ, ಕಚೇರಿಯಲ್ಲಿ ಸಿಬ್ಬಂದಿ ಇರಲಿಲ್ಲ. ಎಲ್ಲ ಖುರ್ಚಿ ಖಾಲಿ ಖಾಲಿಯಾಗಿದ್ದವು.
ಬಿಎಸ್ಎನ್ಎಲ್ನ ಬಹಳಷ್ಟು ಸಿಬ್ಬಂದಿ ನಿವೃತ್ತಿ ಹೊಂದಿದ್ದಾರೆ. ಮುಂದಿನ ತಿಂಗಳು ಸಹ ಹಲವು ಅಧಿಕಾರಿಗಳು ನಿವೃತ್ತಿ ಹೊಂದುವವರಿದ್ದಾರೆ. ಹೀಗಿರುವಾಗ ಸಿಬಿಐ ತನಿಖೆ ಯಾವ ರೀತಿ ನಡೆಯುತ್ತದೆ ಎಂದು ಕಾದು ನೋಡಬೇಕಾಗಿದೆ.