ಮುದ್ದೇಬಿಹಾಳ: ಕಾಂಗ್ರೆಸ್ನ ಬೆಂಬಲ ಹೆಚ್ಚಾಗಿದೆ ಎಂಬುದನ್ನು ತಿಳಿದುಕೊಂಡ ವಿರೋಧಿಗಳು ನಮ್ಮ ಪಕ್ಷದ ಸದಸ್ಯೆ ಲತಾ ಗೂಳಿ ಅವರಿಗೆ ಕೊಟ್ಟಿರುವ ಜಾತಿ ಪ್ರಮಾಣ ಪತ್ರವನ್ನು ರಾತ್ರೋರಾತ್ರಿ ರದ್ದುಗೊಳಿಸಿದ್ದಾರೆ. ಈ ಮೂಲಕ ಸರ್ಕಾರಿ ಅಧಿಕಾರಿಗಳು ರಾಜಕೀಯ ವ್ಯಕ್ತಿಗಳ ಕೈಗೊಂಬೆಯಾಗಿದ್ದಾರೆ ಎಂದು ಮಾಜಿ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿ ಪ್ರಮಾಣ ಪತ್ರವನ್ನು ರದ್ದುಗೊಳಿಸುವ ಅಥವಾ ಅದನ್ನು ಮುಂದುವರೆಸುವ ಕುರಿತು ಪ್ರಕರಣವೊಂದರಲ್ಲಿ ಉಚ್ಚ ನ್ಯಾಯಾಲಯದಿಂದ ನಿರ್ದೇಶನ ಇದೆ. ಅದರಂತೆ ತಹಶೀಲ್ದಾರ್, ಉಪ ತಹಶೀಲ್ದಾರ್‌ರಿಂದ ಅನುಮೋದಿಸಿದ ಜಾತಿ ಪ್ರಮಾಣ ಪತ್ರದ ಮೇಲೆ ಯಾವುದೇ ವ್ಯಕ್ತಿ ತಕರಾರು ಸಲ್ಲಿಸಿದರೆ ಅದನ್ನು ಸೆಕ್ಷನ್ 4 ಬಿ ಪ್ರಕಾರ ಮೇಲ್ಮನವಿ ಎಂದು ಪರಿಗಣಿಸಿ ವಿಚಾರಣೆ ನಡೆಸಬಹುದಾಗಿದೆ. ಇನ್ನು ಸದರಿ ಪ್ರಮಾಣ ಪತ್ರವನ್ನು ಪುರಸ್ಕರಿಸುವ ಅಥವಾ ತಿರಸ್ಕರಿಸುವ ಆದೇಶ ಹೊರಡಿಸುವ ಅಧಿಕಾರ ಉಪವಿಭಾಗಾಧಿಕಾರಿಗಳಿಗೆ ನೀಡಲಾಗಿದೆ. ಆದರೆ ಇಲ್ಲಿ ಪ್ರಮಾಣ ಪತ್ರ ಕೊಟ್ಟಿರುವ ಗ್ರೇಡ್-2 ತಹಶೀಲ್ದಾರ್ ಕಾನೂನು ಬಾಹಿರವಾಗಿ ಪ್ರಮಾಣ ಪತ್ರ ರದ್ದುಗೊಳಿಸಿದ್ದಾರೆ ಎಂದು ದೂರಿದರು.
ಸರ್ಕಾರಿ ಅಧಿಕಾರಿಗಳು ಯಾರದ್ದೋ ಕೈಗೊಂಬೆಯಾಗಿ ಕೆಲಸ ಮಾಡುವುದಲ್ಲ. ತಾಲೂಕು ಮ್ಯಾಜಿಸ್ಟ್ರೇಟ್ಗಳು ಈ ರೀತಿ ಕೆಲಸ ಮಾಡಿದರೆ ಸಾಮಾನ್ಯ ಜನರಿಗೆ ಇವರ ಮೇಲೆ ಯಾವ ನಂಬಿಕೆ ಉಳಿಯಲು ಸಾಧ್ಯವಿದೆ ಎಂದು ಪ್ರಶ್ನಿಸಿದ ನಾಡಗೌಡ, ಕಾಂಗ್ರೆಸ್ ಪಕ್ಷದ ಮೂಲಕ ಅಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತೇವೆ ಎಂದರು .
ಒಂದು ವೇಳೆ ಇದೇ ಪ್ರವೃತ್ತಿ ಮುಂದುವರೆದರೆ ಪಕ್ಷ ಉಗ್ರ ಹೋರಾಟ ನಡೆಸುತ್ತದೆ. ಸಂಖ್ಯಾಬಲ ಇಲ್ಲದ ಕಾರಣ ರಾಜಕೀಯ ತಂತ್ರಗಳನ್ನು ಮಾಡುತ್ತಿದ್ದಾರೆ. ಗೂಳಿ ಕುಟುಂಬ ಸಲ್ಲಿಸಿರುವ ಆದಾಯ ಪ್ರಮಾಣ ಪತ್ರದಲ್ಲಿ ವಾರ್ಷಿಕ 36,000 ರೂ.ಇದೆ ಎಂದು ಅಧಿಕಾರಿಗಳೇ ಕೊಟ್ಟಿರುವ ಪ್ರಮಾಣ ಪತ್ರ ನೀಡಿದ್ದಾರೆ. ಆದರೆ ವಿನಾಕಾರಣ ನಮ್ಮ ಸದಸ್ಯರ ಪ್ರಮಾಣಪತ್ರವನ್ನು ರದ್ದುಗೊಳಿಸಿದ್ದಾರೆ ಎಂದು ಹೇಳಿದರು.
ಇನ್ನು ಗ್ರೇಡ್-2 ತಹಶೀಲ್ದಾರ್ ಜಾತಿ ಪ್ರಮಾಣ ಪತ್ರ ರದ್ದುಗೊಳಿಸಿರುವ ಕುರಿತು ಎಸಿಗೆ ಮೇಲ್ಮನವಿ ಸಲ್ಲಿಸುತ್ತೇವೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಗುರು ತಾರನಾಳ, ತಾಪಂ ಸದಸ್ಯರಾದ ಶ್ರೀಶೈಲ್ ಮರೋಳ,ಪ್ರೇಮಸಿಂಗ ಚವ್ಹಾಣ ಸೇರಿದಂತೆ ಮತ್ತಿತರರು ಇದ್ದರು.