ವಿಜಯಪುರ: ಸಾರಿಗೆ ಸಂಸ್ಥೆಯ ಬಸ್ ಪಲ್ಟಿಯಾಗಿ ಬಾಲಕ ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆ ತಾಳಿಕೋಟಿ ತಾಲೂಕಿನ ಬಳಗಾನೂರ ಗ್ರಾಮದ ಹತ್ತಿರ ನಡೆದಿದೆ.
ವಿಜಯಪುರದಿಂದ ತಾಳಿಕೋಟಿಗೆ ಬರುತ್ತಿದ್ದ ಕೆಎ 28 ಎಫ್2087 ನಂಬರಿನ ಸಾರಿಗೆ ಸಂಸ್ಥೆ ಬಸ್ ಅಪಘಾತಕ್ಕೀಡಾಗಿದೆ. ಎಕ್ಸೆಲ್ ಸೂಪರ್ ಬೈಕ್ನಲ್ಲಿ ಹೊರಟ್ಟಿದ್ದ ಇಬ್ಬರು ಬಾಲಕರು ರಸ್ತೆ ಮಧ್ಯೆ ಬಂದಿದ್ದರಿಂದ ಅದನ್ನು ತಪ್ಪಿಸಲು ಹೋದ ಸಾರಿಗೆ ಸಂಸ್ಥೆ ಬಸ್ ಚಾಲಕ ಅಪಘಾತ ಮಾಡಿದ್ದಾನೆ.
ಈ ಸಂದರ್ಭದಲ್ಲಿ ಬಸ್‌ನ ಗಾಲಿಯೊಳಗೆ ಸಿಲುಕಿ ಬಾಲಕರಲ್ಲಿ ಒಬ್ಬ ಬಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಮೃತ ಬಾಲಕ ಬೀರಣ್ಣ ಪರದಾನಿ ಬೀರಗುಂಡ(೧೫) ಢವಳಗಿ ಎಂದು ಗುರುತಿಸಲಾಗಿದೆ. ಇಬ್ಬರು ಬಾಲಕರು ಸಹೋದರರಾಗಿದ್ದು, ಢವಳಗಿಯಿಂದ ಕೊಣ್ಣೂರ ಗ್ರಾಮದಲ್ಲಿರುವ ಸಹೋದರಿಯನ್ನು ಕರೆದುಕೊಂಡು ಹೋಗಲು ಬರುತ್ತಿದ್ದಾಗ ಈ ಘಟನೆ ನಡೆದಿದೆ. ಬಸ್‌ನಲ್ಲಿದ್ದ ಪ್ರಯಾಣಿಕರಲ್ಲಿ ಸುಮಾರು 10 ಜನರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.
ಗಾಯಾಳುಗಳನ್ನು ತಾಳಿಕೋಟೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ತಾಳಿಕೋಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.