ವಿಜಯಪುರ: ಭಾರತ ಹಾಗೂ ಪಾಕಿಸ್ತಾನ ಮಧ್ಯೆ 1999ರಲ್ಲಿ ನಡೆದ ಕಾರ್ಗಿಲ್ ಕದನದಲ್ಲಿ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಳವಾಟ ಗ್ರಾಮದ ಬಿಎಸ್‌ಎಫ್ ಯೋಧ ದಾವಲಸಾಬ್ ಅಲ್ಲಿಸಾಬ್ ಕಂಬಾರ (ನದಾಫ್) ಹೆಸರು ಚಿರಸ್ಥಾಯಿಯಾಗಿದೆ. ಆದರೆ, ಈಡೇರಬೇಕಿದ್ದ ಆಶ್ವಾಸನೆಯೊಂದು ಹಾಗೆ ಉಳಿದುಕೊಂಡಿದ್ದು, ಯೋಧನ ಕುಟುಂಬ ಬೇಸರ ಹೊರಹಾಕಿದೆ.
ಮುದ್ದೇಬಿಹಾಳದ ಇಂದಿರಾ ನಗರದಲ್ಲಿ ವಾಸವಾಗಿದ್ದ ಅಲಿಸಾಬ್ ಅವರಿಗೆ ದಾವಲಸಾಬ್, ಲಾಡ್ಸಾಬ್, ನಬಿಸಾ ಹಾಗೂ ಶಹಜಾನ್ ಎಂಬ ನಾಲ್ವರು ಮಕ್ಕಳು. ಅದರಲ್ಲಿ ದಾವಲಸಾಬ್ ಹಿರಿಯ ಮಗನಾಗಿದ್ದು 1992ರಲ್ಲಿ ಸೈನ್ಯದಲ್ಲಿ ಸೇವೆಗೆ ಸೇರಿದ್ದರು. ಎಂಟು ವರ್ಷದ ಬಳಿಕ ಕಾರ್ಗಿಲ್‌ನಲ್ಲಿ ನಡೆದ ಕದನದಲ್ಲಿ ಶತ್ರುಪಡೆಯ ಮೂವರು ಸೈನಿಕರನ್ನು ಹೊಡೆದುರುಳಿಸಿ ಗುಂಡೇಟಿಗೆ ಬಲಿಯಾದರು. ಹುತಾತ್ಮರಾದ ಬಳಿಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಮತ್ತು ವಿವಿಧ ಸಂಘ-ಸಂಸ್ಥೆಗಳು ನೆರವಿಗೆ ನಿಲ್ಲುವ ಮೂಲಕ ಔದಾರ್ಯ ಮೆರೆದಿದ್ದಾರೆ.
ಆರ್ಥಿಕ ಸಹಾಯ: ದಾವಲಸಾಬ್ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ 2.5 ಲಕ್ಷ ರೂ., ಕೇಂದ್ರ ಸರ್ಕಾರದಿಂದ 7.5 ಲಕ್ಷ ರೂ. ಪರಿಹಾರ ನೀಡಲಾಗಿದೆ. ಅಲ್ಲದೇ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಕುಟುಂಬಕ್ಕೆ 5 ಲಕ್ಷ ರೂ.ನೀಡಲಾಗಿದೆ. ಇನ್ನು ನಟ ಜಗ್ಗೇಶ್ 50 ಸಾವಿರ.ರೂ., ಡಾ.ರಾಜ್ಕುಮಾರ್ ಅವರು 1.50 ಲಕ್ಷ ರೂ., ಪತ್ರಕರ್ತ ರವಿ ಬೆಳಗೆರೆ 1 ಲಕ್ಷ.ರೂ., ಆದಿಚುಂಚನಗಿರಿಯ ಬಾಲಗಂಗಾಧರ ಸ್ವಾಮೀಜಿ ಅವರು 50 ಸಾವಿರ ರೂ., ಲೋಕ ಶಿಕ್ಷಣ ಟ್ರಸ್ಟ್ನಿಂದ 1.50 ಲಕ್ಷರೂ., ವಿಜಯಾ ಬ್ಯಾಂಕ್ನಿಂದ 50 ಸಾವಿರ ರೂ. ಸಹಾಯಧನ ನೀಡುವ ಮೂಲಕ ಯೋಧನ ಕುಟುಂಬಕ್ಕೆ ನೆರವಾಗಿದ್ದಾರೆ.
ಈಡೇರಬೇಕಿದ್ದ ಆಶ್ವಾಸನೆ: ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಅವರು ಹುತಾತ್ಮ ಸೈನಿಕನ ಕುಟುಂಬದವರಲ್ಲಿ ಒಬ್ಬರಿಗೆ ರಾಜ್ಯ ಸರ್ಕಾರದಿಂದ ನೌಕರಿ ಕೊಡುವ ಭರವಸೆ ನೀಡಿ ಆದೇಶ ನೀಡಿದ್ದರು. ಹಾಗೆಯೇ ಪುರಸಭೆಯಿಂದ ನಿವೇಶನ ಕೊಡುವುದಾಗಿಯೂ ಹೇಳಿದ್ದರು.
ಆದರೆ, ಭರವಸೆ ಈವರೆಗೂ ಈಡೇರಿಲ್ಲ ಅನ್ನೋದು ಯೋಧನ ಕುಟುಂಬಸ್ಥರ ನೋವಾಗಿದೆ. ಆದರೆ, ಮಾಜಿ ಸಚಿವ ಎಂ.ಬಿ.ಪಾಟೀಲ್ ಸಚಿವರಾಗಿದ್ದ ವೇಳೆ ಸಹೋದರಿ ಶಹಜನಾ ಅವರಿಗೆ ಬಿಎಲ್‌ಡಿಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಟೆಂಡರ್ ಕೆಲಸವನ್ನು ನೀಡುವ ಮೂಳಕ ಔದಾರ್ಯ ಮೆರೆದಿದ್ದಾರೆ. ಸದ್ಯಕ್ಕೆ ನಮ್ಮ ಕುಟುಂಬದವರಿಗೆ ನೌಕರಿ ಕೊಡುತ್ತೇವೆ ಎಂದು ಸರ್ಕಾರ ಮುಂದಾದರೂ ನಮ್ಮ ವಯೋಮಿತಿ ಮೀರಿದೆ ಎಂದು ಹುತಾತ್ಮ ಸೈನಿಕ ದಾವಲಸಾಬ್ ಅವರ ಸಹೋದರ ಲಾಡ್ಸಾಬ್ ನೋವು ತೋಡಿಕೊಂಡಿದ್ದಾರೆ.
ಮನೆಗೆ, ಅಂಗಡಿಗೂ ಕಾರ್ಗಿಲ್ ಹೆಸರು: ಮುದ್ದೇಬಿಹಾಳ ನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್‌ನಲ್ಲಿರುವ ಅಟೋಮೊಬೈಲ್ಸ್ ಅಂಗಡಿಗೆ ಕಾರ್ಗಿಲ್ ಆಟೋಮೊಬೈಲ್ ಎಂದು ಹೆಸರಿಡಲಾಗಿದ್ದು ಮನೆಗೂ ಕೂಡ ಕಾರ್ಗಿಲ್ ಮಂಜಿಲ್ ಎಂದು ನಾಮಕರಣ ಮೂಲಕ ದೇಶ ಪ್ರೇಮವನ್ನು ಸಾರಿದ್ದಾರೆ. ಆಟೋಮೊಬೈಲ್‌ನಲ್ಲಿ ಹತ್ತು ಜನ ಕೆಲಸ ಮಾಡುತ್ತಿದ್ದು ಸದ್ಯ ಸೈನಿಕನ ಕುಟುಂಬ ನೆಮ್ಮದಿಯ ಜೀವನ ನಡೆಸುತ್ತಿದೆ.
ಯೋಧನ ಸ್ಮಾರಕ : ಮುದ್ದೇಬಿಹಾಳ ನಗರದ ಹಳೇ ತಹಶೀಲ್ದಾರ್ ಕಚೇರಿಯ ಎದುರಿಗೆ ಹುತಾತ್ಮ ಸೈನಿಕ ದಾವಲಸಾಬ್ ಕಂಬಾರ ಅವರ ಪ್ರತಿಮೆಯೊಂದನ್ನು ಸ್ಥಾಪಿಸಲಾಗಿದೆ. ಹುತಾತ್ಮರಾದ ಸೈನಿಕರ ಪಾರ್ಥೀವ ಶರೀರವನ್ನು ಇಲ್ಲಿಯೇ ಇರಿಸಿ ಗೌರವ ಸಲ್ಲಿಸುವ ರೂಢಿಯನ್ನು ಇಂದಿಗೂ ನಡೆಸಿಕೊಂಡು ಬರಲಾಗುತ್ತಿದೆ.