ವಿಜಯಪುರ : ಕಾಲುವೆಯಲ್ಲಿ ಜಾರಿ ಬಿದ್ದು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಬಾಲಕನ ಜೀವ ಉಳಿಸಲು ಮಹಿಳೆಯೊಬ್ಬರು ಉಟ್ಟ ಸೀರೆ ಬಿಚ್ಚಿಕೊಟ್ಟ ಮನ ಮಿಡಿಯುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಇದೇ ವೇಳೆ ಬಾಲಕನ ರಕ್ಷಣೆಗೆ ಸಮಯ ಪ್ರಜ್ಞೆ ಮೆರೆದು, ಈಜು ಬಾರದಿದ್ದರೂ ಕಾಲುವೆಗೆ ಹಾರಿದ ಶಿಕ್ಷಕನ ಸಾಹಸವನ್ನೂ ಮರೆಯುವಂತಿಲ್ಲ. ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಜಲಾಶಯದ ಪಾರ್ವತಿ ಕಟ್ಟೆ ಸಮೀಪದ ಎಡದಂಡೆ ಕಾಲುವೆ ಇದೆ. ಅದರ ಬಳಿ ತನ್ನ ಸಹೋದರ ಪ್ರವೀಣ್ ದೊಡ್ಡಮನಿ ಜೊತೆ ಬಾಲಕ ಅರುಣ್ ಎಂಬಾತ ಕಾಲುವೆಗೆ ನೀರು ಕುಡಿಯಲು ತೆರಳಿದ್ದಾನೆ. ಈ ವೇಳೆ ಕಾಲು ಜಾರಿ ಕಾಲುವೆಯೊಳಗೆ ಬಿದ್ದಿದ್ದಾನೆ.
ಅಲ್ಲಿಯೇ ಬಟ್ಟೆ ತೊಳೆಯುತ್ತಿದ್ದ ಸಕೀನಾ ಬೇಗಂ ಕೊಡೆಕಲ್ ಎಂಬುವರು ಇದನ್ನ ಕಣ್ಣಾರೆ ಕಂಡಿದ್ದಾರೆ. ಬಾಯಿ ಬಾಯಿ ಬಡ್ಕೊಂಡು ಕಾಲುವೆ ಸುತ್ತಲೂ ಇದ್ದ ಜನರನ್ನೆಲ್ಲ ಸೇರಿಸಿದ್ದಾರೆ. ಬನ್ರೋ ಬನ್ರೋ ಯಪ್ಪಾ, ಬಾಲಕ ನೀರೊಳಗ್ ಬಿದ್ದಾನ್ರೀ ಬನ್ರ್ಯೆಪ್ಪೋ.. ಅಂತಾ ಕೂಗಿ ಕೂಗಿ ಕರೆದಿದ್ದಾರೆ. ಆಲಮಟ್ಟಿಯ ಮಂಜಪ್ಪ ಹೆರ್ಡೇಕರ್ ಸ್ಮಾರಕ ಕಾಲೇಜು ಶಿಕ್ಷಕ ಮಹೇಶ್ ಗಾಳಪ್ಪಗೋಳ ಎಂಬುವರು ಬಾಲಕನ ರಕ್ಷಣೆಗೆ ಮುಂದಾಗಿದ್ದಾರೆ.
ಆದರೆ, ಕಾಲುವೆಗಿಳಿದರೂ ಶಿಕ್ಷಕನಿಗೂ ಈಜು ಬರುತ್ತಿರಲಿಲ್ಲ. ಕೂಡಲೇ ಕುರಿಗಾಹಿಗಳು ಕಾಲುವೆ ಸೆಳೆತಕ್ಕೆ ಸಿಲುಕದಂತೆ, ಬಟ್ಟೆ ಇಲ್ಲ ಕೋಲಿನಿಂದ ಬಾಲಕನನ್ನ ರಕ್ಷಿಸುವಂತೆ ಸಲಹೆ ನೀಡಿದ್ದಾರೆ. ಆಗ ತಕ್ಷಣವೇ ತಾಯಿ ಸಕೀನಾ ಬೇಗಂ, ಹಿಂದೆ ಮುಂದೆ ನೋಡದೇ ತಾವು ಉಟ್ಟ ಸೀರೆಯನ್ನೇ ಬಿಚ್ಚಿಕೊಟ್ಟು ಬಾಲಕನ ರಕ್ಷಣೆಗೆ ನೆರವಾಗಿದ್ದಾರೆ. ಶಿಕ್ಷಕ ಮಹೇಶ್ ಸೀರೆಯನ್ನ ಬಾಲಕನ ಕೈಗೆ ಎಸೆದು ಕಾಲುವೆಯಿಂದ ಮೇಲಕ್ಕೆತ್ತಿದ್ದಾರೆ. ಆಗ ಬದುಕಿತು ಬಡಜೀವ ಅಂತಾ ಬಾಲಕ ಮೇಲಕ್ಕೆ ಬಂದಿದ್ದಾನೆ.
ಸರ್ಕಾರದ ವಿದ್ಯಾಗಮ ಯೋಜನೆಯಡಿ ಮಕ್ಕಳಿಗೆ ಪಾಠ ಹೇಳಲು ನಂದಿದೇವಸ್ಥಾನಕ್ಕೆ ಹೋಗಿ ವಾಪಸ್ ಬೈಕ್ನಲ್ಲಿ ತೆರಳುತ್ತಿದ್ದರು ಶಿಕ್ಷಕ ಮಹೇಶ್. ಅದೇ ವೇಳೆಗೆ ಸಕೀನಾ ಬೇಗಂ ಅವರು ಕಿರುಚಾಟ ಕೇಳಿ ಕಾಲುವೆ ಬಳಿ ಓಡಿ ಬಂದಿದ್ದರು. ಮಹೇಶ್ ಅವರು ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಧಾವಿಸಿದ್ದಾರೆ.
ಇದರ ಜತೆಗೆ ಸಕೀನಾ ಬೇಗ ಸಮಯ ಪ್ರಜ್ಞೆಯಿಂದಾಗಿ ಬಾಲಕ ಅರುಣ್‌ಗೆ ಪುನರ್ಜನ್ಮ ಸಿಕ್ಕಿದೆ. ತಾಯಿ ಅಲ್ಲದಿದ್ದರೂ ಸಕೀನಾ ಬೇಗ ಬಾಲಕನಿಗೆ 2ನೇ ಜನ್ಮ ಕೊಟ್ಟಿದ್ದಾರೆ. ಬಾಲಕ ಜೀವ ಕಾಪಾಡಿದ ಶಿಕ್ಷಕ ಹಾಗೂ ತಾಯಿ ಸಕೀನಾ ಬೇಗಂ ನಿಜಕ್ಕೂ ಆ ಕ್ಷಣಕ್ಕೆ ಪ್ರತ್ಯಕ್ಷ ದೇವರಂತೆಯೇ ಈ ಬಾಲಕನ ಬಾಳಿಗೆ ಬಂದಿದ್ದಾರೆ..